ADVERTISEMENT

ಕೋವಿಡ್‌ಗೆ ಲಸಿಕೆ ದೊರಕದೇ ಇರಬಹುದು: ಬೋರಿಸ್‌ ಜಾನ್ಸನ್‌ ಎಚ್ಚರಿಕೆ

ಪಿಟಿಐ
Published 12 ಮೇ 2020, 20:00 IST
Last Updated 12 ಮೇ 2020, 20:00 IST
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌    

ಲಂಡನ್‌: 'ಕೊರೊನಾ ಸೋಂಕಿಗೆ ಚಿಕಿತ್ಸೆ ಅಥವಾ ದೊಡ್ಡಪ್ರಮಾಣದಲ್ಲಿ ಲಸಿಕೆ ಸಿದ್ಧವಾಗಲು ವರ್ಷಕ್ಕಿಂತಲೂ ಹೆಚ್ಚು ಅವಧಿ ಬೇಕಾಗಬಹುದು. ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಲಸಿಕೆ ದೊರಕದೆಯೇ ಇರಬಹುದು' ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಎಚ್ಚರಿಕೆ ನೀಡಿದ್ದಾರೆ.

'ಆದ್ದರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾದಷ್ಟೂ ಕ್ರಮಗಳನ್ನು ಕೈಗೊಳ್ಳುವ ನಡುವೆಯೇ, ಈಗಿರುವ ಪರಿಸ್ಥಿತಿಯನ್ನು ದೀರ್ಘಾವಧಿಗೆ ಒಟ್ಟಾಗಿ ಎದುರಿಸಲು ನಾವು ಯೋಜನೆ ರೂಪಿಸಿಕೊಳ್ಳಬೇಕು. ಮಹತ್ವದ ಬೆಳವಣಿಗೆ ಆಗಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ನಿರೀಕ್ಷೆ ಯೋಜನೆಯಲ್ಲ' ಎಂದು ಅವರು ಹೇಳಿದ್ದಾರೆ.

'ಕೋವಿಡ್-‌19 ಸುರಕ್ಷತೆ' ಕ್ರಮಗಳೊಂದಿಗೆ ಉದ್ದಿಮೆಗಳು ನಿಧಾನವಾಗಿ ಕಾರ್ಯ ಆರಂಭಿಸಲು ಪ್ರಧಾನಿ ಯೋಜನೆಗಳನ್ನು ರೂಪಿಸಿದ್ದು, ಲಾಕ್‌ಡೌನ್‌ ನಿಯಮಗಳನ್ನು ಈ ವಾರದಿಂದ ಹಂತಹಂತವಾಗಿ ಸಡಿಲಗೊಳಿಸಲು ಸರ್ಕಾರಕ್ಕೆ 50 ಪುಟಗಳ ನೂತನ ಮಾರ್ಗಸೂಚಿಗಳನ್ನು ನೀಡಿದ್ದಾರೆ. ಈ ಮಾರ್ಗಸೂಚಿಗಳ ಮುನ್ನುಡಿಯಲ್ಲಿ ಅವರು ಈ ವಿಷಯ ಉಲ್ಲೇಖಿಸಿದ್ದಾರೆ.

ADVERTISEMENT

ಲಸಿಕೆ ಅಥವಾ ಔಷಧ ಮಾತ್ರ ಈ ಸೋಂಕಿಗೆ ದೀರ್ಘಾವಧಿ ಪರಿಹಾರ ಎನ್ನುವುದನ್ನು ಒಪ್ಪಿಕೊಂಡ ಬೋರಿಸ್‌, 'ಲಸಿಕೆಯ ತ್ವರಿತ ಅಭಿವೃದ್ಧಿಗಾಗಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಪ್ರಮುಖ ಔಷಧ ಕಂಪನಿ ಆಸ್ಟ್ರಾಝೆನೆಕಾ ಸಹಯೋಗದಲ್ಲಿ ಪ್ರಯೋಗ ನಡೆಯುತ್ತಿದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.