ADVERTISEMENT

ಕೊರೊನಾ: ವಿಶ್ವದಾದ್ಯಂತ 1.62 ಲಕ್ಷ ದಾಟಿದ ಸಾವಿನ ಸಂಖ್ಯೆ

ಸೋಂಕಿತರ ಸಂಖ್ಯೆ 23.55 ಲಕ್ಷಕ್ಕೆ ಏರಿಕೆ

ಏಜೆನ್ಸೀಸ್
Published 19 ಏಪ್ರಿಲ್ 2020, 16:05 IST
Last Updated 19 ಏಪ್ರಿಲ್ 2020, 16:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಕೊರೊನಾ ವೈರಸ್ (ಕೋವಿಡ್‌–19) ಸೋಂಕಿಗೆ ವಿಶ್ವದಾದ್ಯಂತ ಬಲಿಯಾದವರ ಸಂಖ್ಯೆ ಭಾನುವಾರ 1.62 ಲಕ್ಷ ದಾಟಿದೆ. 193 ದೇಶಗಳಲ್ಲಿ ಈವರೆಗೆ 23.55 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ವೈರಸ್‌ ಸೋಂಕು ಕಾಣಿಸಿಕೊಂದ್ದು, ಸುಮಾರು 6 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಜಾನ್ಸ್‌ ಹಾಪ್‌ಕಿನ್ಸ್‌ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ 09 ಗಂಟೆ ವೇಳೆಗೆ ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 2,355,676ಕ್ಕೆ ಏರಿಕೆಯಾಗಿದೆ. 162,032 ಮಂದಿ ಮೃತಪಟ್ಟಿದ್ದು, 605,143 ಮಂದಿ ಚೇತರಿಸಿಕೊಂಡಿದ್ದಾರೆ.

ಸ್ಪೇನ್‌ನಲ್ಲಿ 195,944 ಮಂದಿಗೆ ಸೋಂಕು ತಗುಲಿದ್ದು, 20,453 ಜನ ಮೃತಪಟ್ಟಿದ್ದಾರೆ. 77,357 ಜನ ಗುಣಮುಖರಾಗಿದ್ದಾರೆ. ಇಟಲಿಯಲ್ಲಿ ಸೋಂಕಿತರ ಸಂಖ್ಯೆ 175,925 ತಲುಪಿದ್ದು, 23,227 ಮಂದಿ ಸಾವಿಗೀಡಾಗಿದ್ದಾರೆ. 44,927 ಜನ ಚೇತರಿಸಿದ್ದಾರೆ.

ADVERTISEMENT

ಅಮೆರಿಕದಲ್ಲಿ 735,366 ಪ್ರಕರಣ ದಾಖಲಾಗಿದ್ದು, 39,095 ಮಂದಿ ಮೃತಪಟ್ಟಿದ್ದಾರೆ. 66,854 ಜನ ಗುಣಮುಖರಾಗಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಸಾವಿನ ಸಂಖ್ಯೆ ಇಳಿಮುಖ: ‘ನ್ಯೂಯಾರ್ಕ್‌ನಲ್ಲಿ ಕೋವಿಡ್‌-19ರಿಂದಾಗಿ ಪ್ರತಿದಿನ ಕನಿಷ್ಠ 550 ಮಂದಿ ಮೃತಪಡುತ್ತಿದ್ದರು. ಎರಡು ವಾರಗಳಲ್ಲಿ ಇದೇ ಮೊದಲ ಬಾರಿಗೆ ದಿನದ ಸಾವಿನ ಪ್ರಮಾಣ 550ಕ್ಕಿಂತ ಕಡಿಮೆ ದಾಖಲಾಗಿದೆʼ ಎಂದು ಗವರ್ನರ್‌ ಆಂಡ್ರ್ಯೂ ಕುಮೊ ತಿಳಿಸಿದ್ದಾರೆ.

‘ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿರುವುದು ಒಳ್ಳೆಯ ಸುದ್ದಿ. ತುರ್ತು ನಿಗಾ ಘಟಕಗಳಿಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಕಡಿಮೆಯಾಗಿದೆʼ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸೋಂಕಿನ ಹಾಟ್‌ಸ್ಪಾಟ್‌ ಆಗಿರುವ ನ್ಯೂಯಾರ್ಕ್‌ನಲ್ಲಿ ಈವರೆಗೆ 1,31,263 ಪ್ರಕರಣಗಳು ದೃಢಪಟ್ಟಿದ್ದು, 8,890ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

ಭಾರತದಲ್ಲಿ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ಭಾನುವಾರ ಸಂಜೆ ವೇಳೆಗೆ ಸೋಂಕಿತರ ಸಂಖ್ಯೆ 16,116ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 519 ಜನ ಮೃತಪಟ್ಟಿದ್ದು, 2,302 ಮಂದಿ ಚೇತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.