ADVERTISEMENT

ತಪ್ಪಿಲ್ಲದಿದ್ದರೂ 43 ವರ್ಷ ಜೈಲು; ಭಾರತ ಮೂಲದ ಸುಬ್ರಹ್ಮಣ್ಯ ವೇದಂ ಹೋರಾಟದ ಕಥೆ

ಏಜೆನ್ಸೀಸ್
Published 4 ನವೆಂಬರ್ 2025, 14:34 IST
Last Updated 4 ನವೆಂಬರ್ 2025, 14:34 IST
ಸುಬ್ರಹ್ಮಣ್ಯಂ ವೇದಂ
ಸುಬ್ರಹ್ಮಣ್ಯಂ ವೇದಂ   

ಫಿಲಾಡೆಲ್ಫಿಯಾ, ಅಮೆರಿಕ: ಅವರು, ತಮ್ಮದಲ್ಲದ ತಪ್ಪಿಗೆ ಅಮೆರಿಕದ ಜೈಲಿನಲ್ಲಿ ಬರೋಬ್ಬರಿ 43 ವರ್ಷ ಶಿಕ್ಷೆ ಅನುಭವಿಸಿದ್ದರು. ನಾಲ್ಕು ದಶಕಗಳ ಕಾನೂನು ಹೋರಾಟದ ನಂತರ ತಿಂಗಳ ಹಿಂದಷ್ಟೇ ಜೈಲಿನಿಂದಲೂ ಬಿಡುಗಡೆಯಾಗಿದ್ದರು. ಆ ಖುಷಿ ಹೆಚ್ಚು ಹೊತ್ತು ಉಳಿದಿರಲಿಲ್ಲ.

ಇವರು, ಸುಬ್ರಹ್ಮಣ್ಯಂ ವೇದಂ. ಭಾರತ ಮೂಲದ ಇವರಿಗೆ ಸದ್ಯ 64 ವರ್ಷ ವಯಸ್ಸು. ಜೀವಿತಾವಧಿಯ ಬಹುತೇಕ ಅವಧಿ ಜೈಲಿನಲ್ಲೇ ಕಳೆದಿದ್ದಾರೆ. 

ಕೊಲೆ ಆರೋಪ ನಿರಾಧಾರ ಎಂದು ಕಂಡುಬಂದ ಬಳಿಕ ವಲಸೆ ಅಧಿಕಾರಿಗಳು ಗಡಿಪಾರು ಮಾಡಲು ಸಿದ್ಧತೆ ನಡೆಸಿದ್ದರು. ಲೂಸಿಯಾನದ ಅಲೆಕ್ಸಾಂಡ್ರಿಯಾದಲ್ಲಿರುವ ವಲಸಿಗರ ಬಂಧನ ಕೇಂದ್ರದಲ್ಲಿಟ್ಟಿದ್ದರು. ಈಗ ಅಮೆರಿಕದ ಎರಡು ನ್ಯಾಯಾಲಯಗಳು ಗಡಿಪಾರು ಆದೇಶಕ್ಕೆ ತಡೆ ನೀಡಿವೆ.

ADVERTISEMENT

ವೇದಂ 9 ತಿಂಗಳ ಮಗುವಾಗಿದ್ದಾಗ ತಂದೆ–ತಾಯಿಯೊಂದಿಗೆ ಕಾನೂನುಬದ್ಧವಾಗಿ ಅಮೆರಿಕ ಪ್ರವೇಶಿಸಿದ್ದರು. 1980ರಲ್ಲಿ ನಡೆದಿದ್ದ ಸ್ನೇಹಿತನ ಕೊಲೆ ಪ್ರಕರಣವೊಂದರಲ್ಲಿ ವೇದಂ ಹೆಸರನ್ನೂ ಪೊಲೀಸರು ಆರೋಪ ಪಟ್ಟಿಯಲ್ಲಿ ಸೇರಿಸಿದ್ದರು. ತಾವು ನಿರ್ದೋಷಿ ಎನ್ನುವುದನ್ನು ಸಾಬೀತುಪಡಿಸಲು ಅವರು ನಾಲ್ಕು ದಶಕಗಳ ಹೋರಾಟ ನಡೆಸಿದ್ದರು. 

ಸುಬ್ರಹ್ಮಣ್ಯಂ ಅವರ ಗಡಿಪಾರು ಪ್ರಕ್ರಿಯೆಯೂ ಮತ್ತೊಂದು ಅಸಮರ್ಥನೀಯ ಅನ್ಯಾಯವನ್ನು ಪ್ರತಿನಿಧಿಸುತ್ತದೆ ಎಂದು ವಲಸೆ ಮೇಲ್ಮನವಿ ಮಂಡಳಿಯು ಒಪ್ಪಿಕೊಳ್ಳಲಿದೆ ಎಂದು ನಿರೀಕ್ಷಿಸಿದ್ದೇವೆ
ಸರಸ್ವತಿ ವೇದಂ, ಸುಬ್ರಹ್ಮಣ್ಯಂ ವೇದಂ ಸಹೋದರಿ

ಗಡಿಪಾರು ಪ್ರಕರಣದ ಪ್ರತ್ಯೇಕ ವಿಚಾರಣೆ ನಡೆಸಿದ ಎರಡು ನ್ಯಾಯಾಲಯಗಳು ಗಡಿಪಾರು ಮಾಡದಂತೆ ಆದೇಶ ನೀಡಿವೆ. 

‘ವಲಸೆ ಮೇಲ್ಮನವಿ ಬ್ಯುರೋ ಈ ಪ್ರಕರಣವನ್ನು ಪರಿಶೀಲಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವವರೆಗೆ ಗಡಿಪಾರಿಗೆ ತಡೆ ನೀಡಲಾಗಿದೆ’ ಎಂದು ವಲಸೆ ನ್ಯಾಯಾಧೀಶರು ತಿಳಿಸಿದರು.

ಮತ್ತೊಂದೆಡೆ, ವೇದಂ ಪರ ವಕೀಲರು ಪೆನ್ಸಿಲ್ವೇನಿಯಾದ ಜಿಲ್ಲಾ ನ್ಯಾಯಾಲಯದಿಂದ ಸುಬ್ರಹ್ಮಣ್ಯಂ ಗಡಿಪಾರಿಗೆ ತಡೆಯಾಜ್ಞೆ ತಂದರು.

ಪ್ರಕರಣ ಏನು..?

ಸುಬ್ರಹ್ಮಣ್ಯಂ ವೇದಂ ಮತ್ತು ಥಾಮಸ್‌ ಕಿನ್ಸರ್‌ ಪೆನ್ಸಿಲ್ವೇನಿಯಾ ಸ್ಟೇಟ್‌ ವಿಶ್ವವಿದ್ಯಾಲಯದಲ್ಲಿ 1980ರಲ್ಲಿ ಸಹಪಾಠಿಗಳಾಗಿದ್ದರು. ಕಿನ್ಸರ್‌ ಕೊಲೆ ಬೆನ್ನಲ್ಲೇ ವೇದಂ ಹೆಸರು ಕೇಳಿಬಂದಿತ್ತು. ಕೊನೆಯ ಬಾರಿ ಕಿನ್ಸರ್‌ ಅವರೊಂದಿಗೆ ಕಾಣಿಸಿಕೊಂಡಿದ್ದು ಸುಬ್ರಹ್ಮಣ್ಯಂ ಎಂದು ಪೊಲೀಸರು ಅವರನ್ನು ಬಂಧಿಸಿದ್ದರು. ಆಗಸ್ಟ್‌ ತಿಂಗಳಲ್ಲಿ ವೇದಂ ಪರ ವಕೀಲರು ಪ್ರಾಸಿಕ್ಯೂಟರ್‌ಗಳು ಎಂದೂ ಬಹಿರಂಗಪಡಿಸದ ಸಾಕ್ಷ್ಯವೊಂದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಪರಿಶೀಲಿಸಿದ ನ್ಯಾಯಾಧೀಶರು ವೇದಂ ಶಿಕ್ಷೆಯನ್ನು ರದ್ದುಗೊಳಿಸುವ ತೀರ್ಮಾನ ಪ್ರಕಟಿಸಿದರು.  ಜೈಲಿನಲ್ಲಿದ್ದಕೊಂಡೇ ಶಿಕ್ಷಣ ಮುಂದುವರಿಸಿದ್ದ ವೇದಂ ಹಲವು ಪದವಿಗಳನ್ನು ಗಳಿಸಿದ್ದಾರೆ.