ADVERTISEMENT

'ಬೀಜಿಂಗ್ ಲಾಕ್‌ಡೌನ್' ವದಂತಿ ಹರಡಿದ ಮಹಿಳೆ; ತನಿಖೆ ಆರಂಭಿಸಿದ ಚೀನಾ ಪೊಲೀಸ್

ಏಜೆನ್ಸೀಸ್
Published 13 ಮೇ 2022, 8:50 IST
Last Updated 13 ಮೇ 2022, 8:50 IST
   

ಬೀಜಿಂಗ್‌: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಮೂರು ದಿನ ಲಾಕ್‌ಡೌನ್‌ ಘೋಷಣೆಯಾಗಲಿದೆ ಎಂದುಮಹಿಳೆಯೊಬ್ಬರು ಹರಡಿದ್ದ ವದಂತಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಬೀಜಿಂಗ್‌ನಲ್ಲಿ ಕಠಿಣ ಲಾಕ್‌ಡೌನ್‌ ವಿಧಿಸುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಗಾಳಿ ಸುದ್ದಿ ಹರಡಿದ ಬೆನ್ನಲ್ಲೇ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಗುರುವಾರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಲಾಕ್‌ಡೌನ್‌ ವೇಳೆ ಆಹಾರ, ಅಗತ್ಯ ವಸ್ತುಗಳ ಡೆಲಿವರಿ ಸೇವೆಗಳಿಗೂ ನಿರ್ಬಂಧ ಇರಲಿದೆ ಹಾಗೂ ಕೋವಿಡ್‌–19 ಪರೀಕ್ಷೆಗಾಗಿ ಮಾತ್ರವೇ ಮನೆಯಿಂದ ಹೊರಬರಬಹುದು ಎಂಬ ವದಂತಿ ಹಬ್ಬಿತ್ತು. ಆದರೆ, ಈ ಸುದ್ದಿಯನ್ನು ಅಧಿಕಾರಿಗಳು ಅಲ್ಲಗಳೆದಿದ್ದರು.

ಲಾಕ್‌ಡೌನ್‌ ಬದಲು ನಗರದಾದ್ಯಂತ ಮೂರು ದಿನಗಳ ಸಾಮೂಹಿಕ ಪರೀಕ್ಷೆ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗಾಗಿ ಯಾರೊಬ್ಬರೂ ಆತಂಕಗೊಳ್ಳಬೇಕಾಗಿಲ್ಲ ಎಂದು ತಿಳಿಸಿದ್ದರು.

ADVERTISEMENT

ವದಂತಿ ಕುರಿತು ಪ್ರತಿಕ್ರಿಯಿಸಿರುವ ಬೀಜಿಂಗ್ ಪೊಲೀಸರು, 'ಯಾವೊ' ಎಂಬ ಹೆಸರಿನ ಮಹಿಳೆ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಪ್ರಕಟಿಸಿದ್ದಾರೆ.

38 ವರ್ಷದ ಮಹಿಳೆ ವದಂತಿಯನ್ನು ಸೃಷ್ಟಿಸಿದ್ದರು. ಆಕೆಯ ವಿರುದ್ಧಬಂಧನ ಅಥವಾ ಮನೆಯಿಂದ ಹೊರಬರದಂತೆ ಮಾಡಬಹುದಾದ 'ಕಡ್ಡಾಯ ಕ್ರಿಮಿನಲ್‌ ಕ್ರಮಗಳನ್ನು' ಕೈಗೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆ, 'ತುರ್ತು ಸೂಚನೆ' ಎಂದು ವದಂತಿ ಪೋಸ್ಟ್‌ ಹಂಚಿಕೊಂಡಿದ್ದರು. 'ಇದನ್ನು (ವದಂತಿ) ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು ಮತ್ತು ವೇಗವಾಗಿ ಹರಿದಾಡಿತ್ತು. ಸಾಮಾಜಿಕ ಕ್ರಮಗಳನ್ನು ಗಂಭೀರವಾಗಿ ಉಲ್ಲಂಘಿಸಲಾಗಿದೆ' ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.