ADVERTISEMENT

ಶ್ವಾಸಕೋಶದ ಹೊರಗೂ ಕೋವಿಡ್‌ ಲಕ್ಷಣಗಳು: ಬಹುಅಂಗಾಂಗಗಳ ಕಾಯಿಲೆ –ವಿಜ್ಞಾನಿಗಳು

ಬಹುಅಂಗಾಂಗಗಳ ಕಾಯಿಲೆ ಎಂದು ಪರಿಗಣಿಸಲು ವಿಜ್ಞಾನಿಗಳ ಸಲಹೆ

ಪಿಟಿಐ
Published 12 ಜುಲೈ 2020, 11:34 IST
Last Updated 12 ಜುಲೈ 2020, 11:34 IST
.
.   

ಬೊಸ್ಟಾನ್‌: ಶ್ವಾಸಕೋಶದ ಹೊರಗೂ ಕೋವಿಡ್‌–19 ಪರಿಣಾಮಗಳು ಕಂಡು ಬಂದಿವೆ. ಹೀಗಾಗಿ, ತಜ್ಞ ವೈದ್ಯರು ಇದನ್ನು ಬಹು ಅಂಗಾಂಗಳ ಕಾಯಿಲೆ ಎಂದು ಪರಿಗಣಿಸಿ ಚಿಕಿತ್ಸೆ ನೀಡಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ರಕ್ತ ಹೆಪ್ಪುಗಟ್ಟುವುದು, ಮೂತ್ರಪಿಂಡ ವೈಫಲ್ಯ ಮತ್ತು ವಿಪರೀತ ಜ್ವರದಿಂದಾಗುವ ಬುದ್ಧಿಭ್ರಮಣೆಯಂತಹ ನರರೋಗ ಲಕ್ಷಣಗಳ ಬಗ್ಗೆ ವೈದ್ಯರು ಗಮನಹರಿಸುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ಅಮೆರಿಕ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಈ ಸಂಶೋಧನೆ ಅನ್ವಯ ಹಲವು ಕೋವಿಡ್‌–19 ರೋಗಿಗಳು ಮೂತ್ರಪಿಂಡ, ಹೃದ್ರೋಗ ಮತ್ತು ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ‘ನೇಚರ್‌ ಮೆಡಿಸಿನ್‌’ ನಿಯತಕಾಲಿಕೆಯಲ್ಲಿ ಈ ಬಗ್ಗೆ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದೆ.

ADVERTISEMENT

‘ಕೋವಿಡ್‌–19 ಆರಂಭದ ದಿನಗಳಿಂದಲೂ ಅಧ್ಯಯನ ನಡೆಸುತ್ತಿದ್ದೇನೆ. ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುತ್ತಿತ್ತು. ಡಯಾಬಿಟಿಸ್‌ ಇಲ್ಲದಿದ್ದರೂ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿತ್ತು. ಜತೆಗೆ, ಹಲವರಲ್ಲಿ ಹೃದ್ರೋಗ ಮತ್ತು ಮೂತ್ರಪಿಂಡದ ಸಮಸ್ಯೆಗಳಿದ್ದವು’ ಎಂದು ಸಂಶೋಧಕಿ ಆಕೃತಿ ಗುಪ್ತಾ ವಿವರಿಸಿದ್ದಾರೆ.

‘ಕೋವಿಡ್‌–19 ಅನ್ನು ಕೇವಲ ಉಸಿರಾಟದ ತೊಂದರೆಗೆ ಮಾತ್ರ ಸೀಮಿತಗೊಳಿಸಬಾರದು. ಬಹು ಅಂಗಾಂಗಗಳ ಕಾಯಿಲೆ ಎಂದು ಪರಿಗಣಿಸಿ ವೈದ್ಯರು ಚಿಕಿತ್ಸೆ ನೀಡಬೇಕು’ ಎಂದು ತಿಳಿಸಿದ್ದಾರೆ.

ಕೋವಿಡ್‌–19 ರೋಗಿಗಳಲ್ಲಿ ಹೃದಯಾಘಾತವಾಗಿರುತ್ತಿರುವುದಕ್ಕೆ ಸ್ಪಷ್ಟವಾದ ಕಾರಣಗಳು ತಿಳಿದು ಬಂದಿಲ್ಲ. ಆದರೆ, ರಕ್ತ ಹೆಪ್ಪುಗಟ್ಟುವುದರಿಂದ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ತಲೆನೋವು, ಸುಸ್ತು, ವಾಸನೆ ಗ್ರಹಿಸದಿರುವುದು ಕೋವಿಡ್‌–19 ಲಕ್ಷಣಗಳಾಗಿವೆ. ಕೋವಿಡ್‌–19 ತಗುಲಿದ ಶೇಕಡ 8ರಿಂದ 10ರಷ್ಟು ರೋಗಿಗಳು ವಿಪರೀತ ಜ್ವರದಿಂದಾಗುವ ಬುದ್ಧಿಭ್ರಮಣೆಗೆ ಒಳಗಾಗಿರುವುದು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.