ADVERTISEMENT

Covid-19 World update|ಅಮೆರಿಕದಲ್ಲಿ ಒಂದೇ ದಿನ 42,000 ಪ್ರಕರಣ

ಏಜೆನ್ಸೀಸ್
Published 30 ಜೂನ್ 2020, 2:05 IST
Last Updated 30 ಜೂನ್ 2020, 2:05 IST
ಅಮೆರಿದಲ್ಲಿ ಸೋಂಕು ಪತ್ತೆ ಪರೀಕ್ಷೆ
ಅಮೆರಿದಲ್ಲಿ ಸೋಂಕು ಪತ್ತೆ ಪರೀಕ್ಷೆ    

ವಾಷಿಂಗ್ಟನ್‌: ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ ಕನಿಷ್ಠ 42,000 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಅಮೆರಿಕದಲ್ಲಿ ಕೋವಿಡ್‌–19 ಮತ್ತಷ್ಟು ಉಲ್ಬಣಗೊಳ್ಳುತ್ತಾ ಸಾಗಿದೆ.

ಅಮೆರಿಕದ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಸೋಮವಾರ ಪತ್ತೆಯಾದ ಹೊಸ ಸೋಂಕು ಪ್ರಕರಣಗಳೊಂದಿಗೆ ದೇಶದ ಒಟ್ಟಾರೆ ಪ್ರಕರಣಗಳು 26 ಲಕ್ಷ ಸಮೀಪಿಸಿವೆ ಎಂದು ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯ ಸೋಮವಾರ ರಾತ್ರಿ ತಿಳಿಸಿದೆ.

ಇದೇ ವೇಳೆ ಅಮೆರಿದಲ್ಲಿ ಕೊರೊನಾ ವೈರಸ್‌ನಿಂದಾಗಿ ದಿನಂಪ್ರತಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಆದರೆ ಸೋಮವಾರ ರಾತ್ರಿ ಅಂತ್ಯಗೊಂಡಂತೆ 24 ಗಂಟೆಗಳಲ್ಲಿ ಹೊಸದಾಗಿ 355 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಕೋವಿಡ್‌ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸುವಂತೆ ಅಲ್ಲಿನ ರಾಜ್ಯಗಳು ಒತ್ತಾಯಿಸಿವೆ. ಆದರೆ, ವೈಟ್‌ ಹೌಸ್‌ ನಿರಾಕರಿಸುತ್ತಿದೆ.

ಇದು ಮುಗಿಯುವ ಹಂತಕ್ಕೆ ತಲುಪಿಲ್ಲ

‘ಕೊರೊನಾ ವೈರಸ್‌ ಅಂತ್ಯವಾಗಬೇಕು ಎಂದು ನಾವೆಲ್ಲರೂ ಬಯಸುತ್ತೇವೆ, ನಾವೆಲ್ಲರೂ ನಮ್ಮ ಜೀವಗಳನ್ನು ಇದರಿಂದ ರಕ್ಷಿಸಿಕೊಳ್ಳಲು ಬಯಸುತ್ತೇವೆ. ಆದರೆ ಕಠಿಣ ವಾಸ್ತವ ಏನೆಂದರೆ, ಇದು ಮುಗಿಯುವ ಹಂತ ತಲುಪಿಲ್ಲ. ಕೊರೊನಾ ವೈರಸ್‌ ಅನ್ನು ನಿಗ್ರಹಿಸುವ ವಿಷಯದಲ್ಲಿ ಹಲವು ದೇಶಗಳು ಸ್ವಲ್ಪ ಪ್ರಗತಿ ಸಾಧಿಸಿದ್ದರೂ, ಜಾಗತಿಕವಾಗಿ ಸಾಂಕ್ರಾಮಿಕ ರೋಗವು ತೀವ್ರ ವೇಗದಲ್ಲಿ ಹೆಚ್ಚುತ್ತಿದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಚೀನಾದಲ್ಲಿ 19 ಪ್ರಕರಣಗಳು ವರದಿ

ಇಡೀ ಜಗತ್ತಿಗೇ ಸೋಂಕು ತಗುಲಿಸಿದ ಚೀನಾದಲ್ಲಿ ಕೊರೊನಾ ವೈರಸ್‌ ಸಂಪೂರ್ಣ ನಿಯಂತ್ರಣದಲ್ಲಿದೆ. 24 ಗಂಟೆಗಳಲ್ಲಿ ಅಲ್ಲಿ ವರದಿಯಾಗಿರುವುದು ಕೇವಲ 19 ಪ್ರಕರಣಗಳು. ಇದರಲ್ಲಿ ಬೀಜಿಂಗ್‌ನಿಂದ ವರದಿಯಾಗಿರುವುದು 7 ಪ್ರಕರಣಗಳಷ್ಟೇ. ಇದರೊಂದಿಗೆ ದೇಶದ ಒಟ್ಟಾರೆ ಸೋಂಕು ಪ್ರರಣಗಳ ಸಂಖ್ಯೆ 83,531 ಆಗಿದೆ. ಸತ್ತವರ ಸಂಖ್ಯೆ 4,634ಕ್ಕೆ ತಲುಪಿದೆ.

ಲ್ಯಾಟಿನ್‌ ಅಮೆರಿಕದಲ್ಲಿ ಹೇಗಿದೆ ಪರಿಸ್ಥಿತಿ

ಲ್ಯಾಟಿನ್‌ ಅಮೆರಿಕದ ರಾಷ್ಟ್ರಗಳು ಸದ್ಯ ಕೊರೊನಾ ವೈರಸ್‌ನ ಹಾಟ್‌ಸ್ಪಾಟ್‌ಗಳಾಗಿವೆ. ಅದರಲ್ಲೂ ಬ್ರೆಜಿಲ್‌ನಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಸೋಮವಾರ ಬ್ರೆಜಿಲ್‌ನಲ್ಲಿ ಸೋಂಕಿಗೆ 692 ಮಂದಿ ಪ್ರಾಣ ತೆತ್ತಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 58,314 ಕ್ಕೆ ತಲುಪಿದೆ. ಇನ್ನು 24 ಗಂಟೆಗಳಲ್ಲಿ ದೇಶದಲ್ಲಿ 24,052 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 13,68,195 ಕ್ಕೆ ತಲುಪಿದೆ, ಇದು ಅಮೆರಿಕ ನಂತರದ ಅತಿಹೆಚ್ಚು ಪ್ರಕರಣಗಳು. ಇದೇ ವೇಳೆ ಪಾನಾಮಾದಲ್ಲಿ 24 ಗಂಟೆಗಳಲ್ಲಿ 1,099 ಪ್ರಕರಣಗಳು ವರದಿಯಾಗಿವೆ.

ಕ್ಯೂಬಾ ಮಾದರಿ

ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳಲ್ಲಿ ಕೊರೊನಾ ವೈರಸ್‌ ತಾಂಡವವಾಡುತ್ತಿದ್ದರೂ, ಕ್ಯೂಬಾ ಮಾತ್ರ ನಿರುಮ್ಮಳವಾಗಿದೆ. ನೆರೆಹೊರೆ ರಾಷ್ಟ್ರಗಳಲ್ಲೆಲ್ಲ ಸೋಂಕು ಉಲ್ಬಣಗೊಂಡಿದ್ದರೂ, ಕ್ಯೂಬಾದಲ್ಲಿ ಮಾತ್ರ ಈ ವರೆಗೆ ವರದಿಯಾಗಿರುವುದು ಕೇವಲ 2340 ಪ್ರಕರಣಗಳು. ಇದರಲ್ಲಿ ಮೃತಪಟ್ಟವರ ಸಂಖ್ಯೆ 86 ಮಾತ್ರ. ಕ್ಯೂಬಾ ಕೊರೊನಾ ವೈರಸ್‌ ನಿಯಂತ್ರಣಾ ಕ್ರಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತಿದೆ.

ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ಅಗ್ರ 5 ರಾಷ್ಟ್ರಗಳು

ಅಮೆರಿಕ– 25,87,154 (1,26,127)
ಬ್ರೆಜಿಲ್‌– 13,68,195 (58,314)
ರಷ್ಯಾ– 6,40,246 (9,152)
ಭಾರತ– 5,48,318 (16,475)
ಬ್ರಿಟನ್‌– 3,13,470 (43,659)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.