ADVERTISEMENT

Covid 19 World Update| ಬ್ರಿಟನ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 286 ಸಾವು

ಏಜೆನ್ಸೀಸ್
Published 9 ಜೂನ್ 2020, 16:55 IST
Last Updated 9 ಜೂನ್ 2020, 16:55 IST
ಕೊರೊನಾ ವೈರಸ್‌ಗೆ ಪ್ರಾಣ ತೆತ್ತವರಿಗೆ ಬ್ರೆಜಿಲ್‌ನ ಆರೋಗ್ಯ ಕಾರ್ಯಕರ್ತರಿಂದ ಶ್ರದ್ಧಾಂಜಲಿ
ಕೊರೊನಾ ವೈರಸ್‌ಗೆ ಪ್ರಾಣ ತೆತ್ತವರಿಗೆ ಬ್ರೆಜಿಲ್‌ನ ಆರೋಗ್ಯ ಕಾರ್ಯಕರ್ತರಿಂದ ಶ್ರದ್ಧಾಂಜಲಿ    

ರಿಯೊ ಡಿ ಜನೈರೊ/ವಾಷಿಂಗ್ಟನ್‌ ಡಿಸಿ: ವಿಶ್ವದಲ್ಲೇ ಅತಿಹೆಚ್ಚು ಕೊರೊನಾ ವೈರಸ್‌ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ ಸಾವಿನ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ. ಸೋಮವಾರ ಒಂದೇ ದಿನ ಅಲ್ಲಿ 679 ಮಂದಿ ಬಲಿಯಾಗಿದ್ದಾರೆ.

ಬ್ರಿಟನ್‌ನಲ್ಲಿ ಕೋವಿಡ್-19 ರೋಗದಿಂದ ಸಾವಿಗೀಡಾದವರ ಸಂಖ್ಯೆ 40, 883ಕ್ಕೇರಿದೆ.ಕಳೆದ 24 ಗಂಟೆಗಳಲ್ಲಿ286 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ.

7 ಲಕ್ಷ ಆಸುಪಾಸು ಸಂಖ್ಯೆಯ ಕೋವಿಡ್‌ ಪ್ರಕರಣಗಳನ್ನು ಹೊಂದಿರುವ ಬ್ರೆಜಿಲ್‌ ಸೋಮವಾರ 15,654 ಹೊಸ ಪ್ರಕರಣಗಳನ್ನು ಕಂಡಿದೆ. ಈ ಮಧ್ಯೆ ಬ್ರೆಜಿಲ್‌ನ ಆರೋಗ್ಯ ಸಚಿವಾಲಯ ಅಧಿಕೃತ ಅಂಕಿ ಸಂಖ್ಯೆಗಳನ್ನು ಪ್ರಕಟಿಸುವುದನ್ನೇ ನಿಲ್ಲಿಸಿದೆ. ಇದು ತಜ್ಞರು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ADVERTISEMENT

ಇನ್ನು ಬ್ರೆಜಿಲ್‌ನ ರಾಜ್ಯಗಳು ಜಾರಿಗೆ ತಂದಿದ್ದ ಲಾಕ್‌ಡೌನ್‌ ಮತ್ತು ಪ್ರತ್ಯೇಕಿಸುವ ಕ್ರಮಗಳನ್ನು ರದ್ದುಗೊಳಿಸಿದ ರಾಷ್ಟ್ರದ ಅಧ್ಯಕ್ಷ ಜೈರ್ ಬೋಲ್ಸನಾರೊ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ‘ಅಧಿಕೃತ ಅಂಕಿಸಂಖ್ಯೆಗಳನ್ನು ಮರೆ ಮಾಚುತ್ತೀರಿ, ನಿಮ್ಮ ಬೆಂಬಲಿಗರಿಗೆ ರ‍್ಯಾಲಿಗಳ ಮೂಲಕ ಗುಂಪುಗೂಡಲು ಪ್ರೋತ್ಸಾಹಿಸುತ್ತೀರಿ, ನಾವು ಏನು ಮಾಡಬೇಕೆಂದು ನೀವು ಅಪೇಕ್ಷಿಸುತ್ತಿದ್ದೀರಿ,’ಎಂಬ ಪ್ರಶ್ನೆ ದೇಶದಾದ್ಯಂತ ಕೇಳಿಬರುತ್ತಿದೆ.

ಬ್ರೆಜಿಲ್‌ನಲ್ಲಿ ಈ ವರೆಗೆ 36,455 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ.

ಅತಿ ಹೆಚ್ಚು ಕೋವಿಡ್‌ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕ 20 ಲಕ್ಷ ಮೀರಿದ ಸೋಂಕು ಪ್ರಕರಣಗಳನ್ನು ಹೊಂದಿದೆ. ಅಲ್ಲಿ ಈ ವರೆಗೆ 2,026,493 ಪ್ರಕರಣಗಳು ವರದಿಯಾಗಿವೆ. ಒಟ್ಟು 113,055 ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್‌ ಹೊತ್ತಿಗೆ ಅಲ್ಲಿ ಒಟ್ಟು 145,000 ಮಂದಿ ಕೋವಿಡ್‌ಗೆ ಬಲಿಯಾಗುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ದಿನವೊಂದರಲ್ಲಿ ಸಾಯುವವರ ಸಂಖ್ಯೆ 5 ಸಾವಿರಕ್ಕೆ ತಲುಪಲಿದೆ ಎಂದೂ ಅದು ಮುನ್ಸೂಚನೆ ನೀಡಿದ್ದಾರೆ.

476,043 ಪ್ರಕರಣಗಳನ್ನು ಹೊಂದಿರುವ ರಷ್ಯಾ, ಅತಿ ಹೆಚ್ಚು ಕೋವಿಡ್‌ ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಿರುವ ರಷ್ಯಾ ತನ್ನ ರಾಷ್ಟ್ರದ ಗಡಿಗಳನ್ನು ಅಲ್ಪ ಪ್ರಮಾಣದಲ್ಲಿ ತೆರೆಯುವುದಾಗಿ ಸೋಮವಾರ ಘೋಷಣೆ ಮಾಡಿದೆ. ಈ ಮಧ್ಯೆ ಅದು ಮುಂದಿನ ವಾರ ತನ್ನದೇ ಹೊಸ ಔಷಧವನ್ನು ಕೋವಿಡ್‌ಗೆ ವಿರುದ್ಧವಾಗಿ ಬಳಸಲು ಮುಂದಾಗಿದೆ. ದೇಶದಲ್ಲಿ ಕೋವಿಡ್‌ಗೆ ಪ್ರಾಣ ತೆತ್ತವರ ಸಂಖ್ಯೆ 5,963.

ಪಾಕಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆ?

ಕೊರೊನಾ ವೈರಸ್‌ ಇನ್ನು ಎರಡು ಮೂರು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಉಲ್ಭಣಗೊಳ್ಳುವ ಸಾಧ್ಯತೆಗಳಿವೆ ಎಂದು ಸ್ವತಃ ಪ್ರಧಾನಿ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ. ಸದ್ಯ ಅಲ್ಲಿ 103,671 ಪ್ರಕರಣಗಳಿದ್ದು, 2,067 ಮಂದಿ ಮೃತಪಟ್ಟಿದ್ದಾರೆ.
ಈ ಮಧ್ಯೆ ಲಾಕ್‌ ಡೌನ್‌ ಅನ್ನು ತೆರವುಗೊಳಿಸುವುದಾಗಿಯೂ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.