ADVERTISEMENT

Covid-19 World Update: ಲಸಿಕೆ ವಿತರಣೆಗೆ ನೆರವು, 180 ರಾಷ್ಟ್ರಗಳ ಸಮ್ಮತಿ

ಏಜೆನ್ಸೀಸ್
Published 12 ಅಕ್ಟೋಬರ್ 2020, 16:46 IST
Last Updated 12 ಅಕ್ಟೋಬರ್ 2020, 16:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಕೋವಿಡ್–19 ಲಸಿಕೆಗಳನ್ನು ಬಡ ಹಾಗೂ ಶ್ರೀಮಂತ ರಾಷ್ಟ್ರಗಳಿಗೆ ನ್ಯಾಯಯುತವಾಗಿ ವಿತರಿಸುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಯತ್ನಕ್ಕೆ ಹಣಕಾಸು ನೆರವು ನೀಡಲು 180ಕ್ಕೂ ಹೆಚ್ಚು ದೇಶಗಳು ಸಮ್ಮತಿಸಿವೆ.

ಕೊವಾಕ್ಸ್‌ ಹಣಕಾಸು ಸೌಲಭ್ಯಕ್ಕೆ ಸಂಬಂಧಿಸಿ ಡಬ್ಲ್ಯುಎಚ್‌ಒ ಜತೆ ಕಾರ್ಯನಿರ್ವಹಿಸುತ್ತಿರುವ ಜಿಎವಿಐ ಲಸಿಕೆ ಮೈತ್ರಿಕೂಟದ ಸದಸ್ಯರ ಸಂಖ್ಯೆ 170 ಇದ್ದುದು ಈಗ ಹೆಚ್ಚಳಗೊಂಡಿದೆ. ಇತ್ತೀಚೆಗೆ ಚೀನಾವೂ ಮೈತ್ರಿಕೂಟದಲ್ಲಿ ಭಾಗಿಯಾಗುವುದಾಗಿ ಘೋಷಿಸಿದೆ ಎಂದು ಡಬ್ಲ್ಯುಎಚ್‌ಒ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಜಾನ್ಸ್‌ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ದತ್ತಾಂಶಗಳ ಪ್ರಕಾರ, ವಿಶ್ವದಾದ್ಯಂತ ಈವರೆಗೆ 3.7 ಕೋಟಿಗೂ ಹೆಚ್ಚು ಮಂದಿ ಕೊರೊನಾ ವೈರಸ್ ಸೋಂಕಿತರಾಗಿದ್ದಾರೆ. 10.7 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 2.6 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.

ADVERTISEMENT

ಅಮೆರಿಕದಲ್ಲಿ 77 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ತಗುಲಿದ್ದು, 2.1 ಲಕ್ಷಕ್ಕೂ ಹೆಚ್ಚು ಸೋಂಕಿತರು ಅಸುನೀಗಿದ್ದಾರೆ.

ಅತಿಹೆಚ್ಚು ಸೋಂಕು ತಗುಲಿರುವ ಜನರಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 71.2 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಮೃತರ ಸಂಖ್ಯೆ 1 ಲಕ್ಷ ದಾಟಿದೆ. ಬ್ರೆಜಿಲ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50 ಲಕ್ಷ ದಾಟಿದ್ದು 1,50,488 ಮಂದಿ ಈವರೆಗೆ ಸಾವಿಗೀಡಾಗಿದ್ದಾರೆ. ರಷ್ಯಾದಲ್ಲಿ ಈವರೆಗೆ 13 ಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದು 22,594 ಜನ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.