ADVERTISEMENT

ಅಮೆರಿಕದಲ್ಲಿ ಮಕ್ಕಳ ಸಾವು: ಕೋವಿಡ್‌ ಲಸಿಕೆಯ ಸಾಧ್ಯತೆ ಎಂದ ಟ್ರಂಪ್ ಆಡಳಿತ, ತನಿಖೆ

ರಾಯಿಟರ್ಸ್
Published 13 ಸೆಪ್ಟೆಂಬರ್ 2025, 6:11 IST
Last Updated 13 ಸೆಪ್ಟೆಂಬರ್ 2025, 6:11 IST
ಕೋವಿಡ್‌ ಲಸಿಕೆ– ಪ್ರಾತಿನಿಧಿಕ ಚಿತ್ರ
ಕೋವಿಡ್‌ ಲಸಿಕೆ– ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಅಮೆರಿಕದಲ್ಲಿ ಮೃತಪಟ್ಟ 25 ಮಕ್ಕಳ ಸಾವಿಗೆ ಕೋವಿಡ್ ಲಸಿಕೆ ಕಾರಣವಿರಬಹುದು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸರ್ಕಾರದ ಆರೋಗ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕೋವಿಡ್ ಲಸಿಕೆಯ ಅಡ್ಡ ಪರಿಣಾಮ ಅಥವಾ ಕೆಟ್ಟ ಅನುಭವವನ್ನು ಆಧರಿಸಿ ಫೆಡರಲ್‌ ಲಸಿಕೆಯ ಅಡ್ಡ ಪರಿಣಾಮ ವರದಿ ವ್ಯವಸ್ಥೆಗೆ ಸಲ್ಲಿಕೆಯಾದ ಮಾಹಿತಿ ಅನ್ವಯ ಈ ನಿರ್ಧಾರಕ್ಕೆ ಈ ನಾಲ್ವರು ಅಧಿಕಾರಿಗಳ ಸಮಿತಿ ಬಂದಿದೆ ಎಂದು ವಾಷಿಂಗ್ಟನ್‌ ಪೋಸ್ಟ್ ವರದಿ ಮಾಡಿದೆ.

ಅಮೆರಿಕ ಆಹಾರ ಮತ್ತು ಔಷಧ ನಿಯಂತ್ರಣ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವ ಕೇಂದ್ರದ ಸಿಬ್ಬಂದಿ ನಿರಂತರವಾಗಿ ವಿಶ್ಲೇಷಣೆ ಮತ್ತು ಇನ್ನಿತರ ಸುರಕ್ಷತಾ ಮಾಹಿತಿ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಲಸಿಕೆಯ ಸುರಕ್ಷತಾ ಮಾಹಿತಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡದ ಹೊರತು ಇದನ್ನು ‘ಶುದ್ಧ ಊಹಾಪೋಹ’ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಹೊಸ ಕೋವಿಡ್ ಲಸಿಕೆ ಶಿಫಾರಸುಗಳಿಗೆ ಪ್ರಸ್ತುತ ಮಕ್ಕಳ ಸಾವಿನ ಪ್ರಕರಣಗಳನ್ನು ಸೇರಿಸಲು ಸಿಡಿಸಿಗೆ ಟ್ರಂಪ್‌ ಆಡಳಿತ ನಿರ್ಧರಿಸಿದೆ ಎನ್ನಲಾಗಿದೆ.

ಮಾಡೆರ್ನಾ ಕೋವಿಡ್‌ ಲಸಿಕೆ ಪಡೆದ 90 ರಾಷ್ಟ್ರಗಳಲ್ಲಿರುವ ಮಕ್ಕಳು ಅಥವಾ ಗರ್ಭಿಣಿಯರಲ್ಲಿ ಯಾವುದೇ ಅಡ್ಡ ಪರಿಣಾಮ ಬೀರಿದ ವರದಿಯಾಗಿಲ್ಲ ಎಂದು ಕಂಪನಿ ತನ್ನ ಇ–ಮೇಲ್‌ ಹೇಳಿಕೆಯಲ್ಲಿ ತಿಳಿಸಿದೆ.

‘ಬಯೋಎನ್‌ಟೆಕ್‌ ಜತೆಗೂಡಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಶತಕೋಟಿಗೂ ಅಧಿಕ ಜನರಿಗೆ ನೀಡಲಾಗಿದೆ. ಇವರಲ್ಲಿ ವಯಸ್ಕರು, ಯುವಕರು, ಮಕ್ಕಳು ಸೇರಿದ್ದಾರೆ. ಸುರಕ್ಷತೆ ಮತ್ತು ವೈರಾಣು ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿದ ವರದಿಗಳು ದಾಖಲಾಗಿವೆ’ ಎಂದು ಫೈಜರ್ ಹೇಳಿದೆ.

‘ತಾನು ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯ ಕ್ಲಿನಿಕಲ್ ಡಾಟಾ ಮತ್ತು ನೈಜ ಸಾಕ್ಷಿಗಳು ಎಫ್‌ಡಿಎಗೆ ಲಭ್ಯವಿದೆ. ಇದರೊಂದಿಗೆ ಜಗತ್ತಿನಾದ್ಯಂತ ಇರುವ ಔಷಧ ನಿಯಂತ್ರಕರು ಮತ್ತು ವಿಜ್ಞಾನಿಗಳು ಹಾಗೂ ಸಾರ್ವಜನಿಕ ಆರೋಗ್ಯದ ವೈದ್ಯಕೀಯ ತಜ್ಞರು ಇದನ್ನು ಪರಿಶೀಲಿಸಿ ಸುರಕ್ಷಿತ ಎಂದಿದ್ದಾರೆ’ ಎಂದು ನೊವಾವ್ಯಾಕ್ಸ್‌ ತಿಳಿಸಿದೆ.

ಆದರೆ ಕಳೆದ ವಾರ ಎಫ್‌ಡಿಎ ಆಯುಕ್ತ ಮಾರ್ಟಿ ಮಕರೇ ಅವರು ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ, ‘ಕೋವಿಡ್ ಲಸಿಕೆಯಿಂದಲೇ ಮಕ್ಕಳು ಮೃತಪಟ್ಟಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಮುಂದಿನ ಕೆಲ ವಾರಗಳಲ್ಲಿ ವರದಿ ಬಹಿರಂಗಪಡಿಸಲಾಗುವುದು’ ಎಂದಿದ್ದರು.

‘ಲಸಿಕೆಗಳನ್ನು ಕೋವಿಡ್‌ ಲಸಿಕೆ ಶಿಫಾರಸು ಪಟ್ಟಿಯಿಂದ ತೆಗೆಯಲಾಗಿದೆ. ಜತೆಗೆ ಮಕ್ಕಳಿಗೆ, ಯುವಜನತೆಗೆ ಹಾಗೂ ಗರ್ಭಿಣಿಯರಿಗೆ ಕಡ್ಡಾಯ ಲಸಿಕೆಯಿಂದ ಕೋವಿಡ್ ಅನ್ನು ತೆಗೆಯಲಾಗಿದೆ’ ಎಂದು ಅಮೆರಿಕದ ಆರೋಗ್ಯ ಕಾರ್ಯದರ್ಶಿ ರಾಬರ್ಟ್ ಎಫ್‌. ಕೆನಡಿ ಜೂನಿಯರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.