ADVERTISEMENT

ಕೋವಿಡ್: ಮನುಷ್ಯನ ಮೇಲೆ ಪ್ರಯೋಗಕ್ಕೆ ಇನ್ನೆರಡು ಲಸಿಕೆ

ಏಜೆನ್ಸೀಸ್
Published 22 ಏಪ್ರಿಲ್ 2020, 20:15 IST
Last Updated 22 ಏಪ್ರಿಲ್ 2020, 20:15 IST
ಪೆರುಗ್ವೆಯಲ್ಲಿ ಜ್ವರಕ್ಕೆ ಲಸಿಕೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ. (ಪ್ರಾತಿನಿಧಿಕ ಚಿತ್ರ)
ಪೆರುಗ್ವೆಯಲ್ಲಿ ಜ್ವರಕ್ಕೆ ಲಸಿಕೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ. (ಪ್ರಾತಿನಿಧಿಕ ಚಿತ್ರ)   

ಬರ್ಲಿನ್: ಜರ್ಮನಿ ಮತ್ತು ಬ್ರಿಟನ್‌ನಲ್ಲಿ ಕೋವಿಡ್–19ಗೆ ಅಭಿವೃದ್ಧಿಪಡಿಸುತ್ತಿರುವಲಸಿಕೆಯನ್ನು ಮನುಷ್ಯನ ಮೇಲೆ ಪರೀಕ್ಷಾರ್ಥವಾಗಿ ಪ್ರಯೋಗಿಸಲು ಅನುಮತಿ ದೊರೆತಿದೆ. ಬ್ರಿಟನ್‌ನಲ್ಲಿ ಗುರುವಾರದಿಂದ ಪ್ರಯೋಗ ಆರಂಭವಾಗಲಿದೆ. ಜರ್ಮನಿಯಲ್ಲಿ ಏಪ್ರಿಲ್ ಕೊನೆ ವಾರದಲ್ಲಿ ಪರೀಕ್ಷೆ ಆರಂಭವಾಗಲಿದೆ. ಈ ಮೂಲಕ ಮಾನವನ ಮೇಲೆ ಪ್ರಯೋಗಿಸುವ ಹಂತ ಮುಟ್ಟಿರುವ ಕೋವಿಡ್–19 ಲಸಿಕೆಗಳ ಸಂಖ್ಯೆ ಐದಕ್ಕೇರಿದೆ.

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈ ಪ್ರಯೋಗ ನಡೆಸುತ್ತಿದೆ. ಚಿಂಪಾಜಿಗಳಲ್ಲಿ ಇರುವ ವೈರಾಣುವನ್ನು ಆಧರಿಸಿ, ಲಸಿಕೆಯನ್ನು ಈ ತಂಡ ಅಭಿವೃದ್ಧಿಪಡಿಸಿದೆ. ಈ ಲಸಿಕೆಯನ್ನು ಹೀಗಾಗಲೇ ಇಲಿಗಳ ಮೇಲೆ ಪ್ರಯೋಗಿಸಿ, ಸಕಾರಾತ್ಮಕ ಫಲಿತಾಂಶ ಪಡೆಯಲಾಗಿದೆ.

ಈ ತಂಡವು ಮೊದಲ ಹಂತಗಳಲ್ಲಿ 510 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲು ಅನುಮತಿ ಪಡೆದಿದೆ. 18ರಿಂದ 55 ವರ್ಷದ ವಯಸ್ಸಿನವರ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಈ ಲಸಿಕೆ ಯಶಸ್ವಿಯಾಗುವ ಸಾಧ್ಯತೆ ಶೇ 80ರಷ್ಟು. ಸೆಪ್ಟೆಂಬರ್ ವೇಳೆಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ತಂಡವು ಹೇಳಿದೆ.

ADVERTISEMENT

ಜರ್ಮನಿಯ ಬಯೋಎನ್‌ಟೆಕ್ ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಮನುಷ್ಯನ ಮೇಲೆ ಪರೀಕ್ಷಾರ್ಥವಾಗಿ ಪ್ರಯೋಗಿಸಲಾಗುತ್ತದೆ. ಮೊದಲ ಹಂತದಲ್ಲಿ 200 ಮಂದಿ ಆರೋಗ್ಯವಂತ ಸ್ವಯಂಸೇವಕರ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ ರೋಗಪೀಡಿತರ ಮೇಲೆ ಪ್ರಯೋಗ ನಡೆಸಲಾಗುತ್ತದೆ. ಜೂನ್ ಅಂತ್ಯದ ವೇಳೆಗೆ
ಈ ಪ್ರಯೋಗದ ಫಲಿತಾಂಶ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.