ADVERTISEMENT

ಕೊಲೆಯಾದ ವ್ಯಕ್ತಿ ಹಿಂದೂ ಅರ್ಚಕ ಅಲ್ಲ: ಬಾಂಗ್ಲಾ ಸರ್ಕಾರ

ಪಿಟಿಐ
Published 22 ಡಿಸೆಂಬರ್ 2024, 13:19 IST
Last Updated 22 ಡಿಸೆಂಬರ್ 2024, 13:19 IST
<div class="paragraphs"><p>ಬಾಂಗ್ಲಾದೇಶದಲ್ಲಿ&nbsp;ಇಸ್ಕಾನ್‌ ಮುಖಂಡರು ಪ್ರತಿಭಟನೆ ನಡೆಸಿದರು</p></div>

ಬಾಂಗ್ಲಾದೇಶದಲ್ಲಿ ಇಸ್ಕಾನ್‌ ಮುಖಂಡರು ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ

ಕೋಲ್ಕತ್ತ/ಢಾಕಾ: ‘ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಕೊಲೆಯಾದ ವ್ಯಕ್ತಿ ಹಿಂದೂ ಅರ್ಚಕ ಅಲ್ಲ. ಚಿತಾಗಾರದಲ್ಲಿನ ವಸ್ತುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಆ ವ್ಯಕ್ತಿಯ ಸಾವು ಸಂಭವಿಸಿದೆಯೇ ಹೊರತು ಕೋಮುಗಲಭೆಯಿಂದ ಅಲ್ಲ’ ಎಂದು ಢಾಕಾದ ಮಧ್ಯಂತರ ಸರ್ಕಾರ ತಿಳಿಸಿದೆ.

ADVERTISEMENT

ಆ ವ್ಯಕ್ತಿಯ ಕೊಲೆ ಸಂಬಂಧ ಕೋಲ್ಕತ್ತದ ಇಸ್ಕಾನ್‌ ಮಾಡಿದ್ದ ಆರೋಪಗಳನ್ನು ಬಾಂಗ್ಲಾದೇಶದ ಮುಖ್ಯ ಸಲಹೆಗಾರರ ಮಾಧ್ಯಮ ವಿಭಾಗ ಅಲ್ಲಗಳೆದಿದೆ. ‘ದರೋಡೆ ಪ್ರಯತ್ನದ ವೇಳೆ ಈ ಘಟನೆ ನಡೆದಿರುವ ಸಾಧ್ಯತೆಯಿದೆ’ ಎಂದು ಅದು ಹೇಳಿದೆ.

ಈ ಸಂಬಂಧ ಬಾಂಗ್ಲಾದೇಶದ ಇಸ್ಕಾನ್‌ ಪ್ರತಿನಿಧಿಗಳು ಮತ್ತು ನಾಟೋರ್ ಪೊಲೀಸರಿಂದ ಪಡೆದ ಮಾಹಿತಿಯನ್ನು ಆಧರಿಸಿ ಮಾಧ್ಯಮ ವಿಭಾಗ ಫೇಸ್‌ಬುಕ್‌ನಲ್ಲಿ ವಿವರಣೆ ನೀಡಿದೆ. 

ಹತ್ಯೆ ಕುರಿತು ಶನಿವಾರವಷ್ಟೇ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದ ಕೋಲ್ಕತ್ತದ ಇಸ್ಕಾನ್‌ನ ವಕ್ತಾರ ರಾಧಾರಮಣ್‌ ದಾಸ್‌ ಅವರು, ‘ಬಾಂಗ್ಲಾದೇಶದ ನಾಟೋರ್‌ ವ್ಯಾಪ್ತಿಯ ಚಿತಾಗಾರದ ದೇಗುಲದಲ್ಲಿ ಹಿಂದೂ ಅರ್ಚಕ ತರುಣ್‌ ಕುಮಾರ್‌ ದಾಸ್‌ ಎಂಬುವರನ್ನು ತೀವ್ರವಾದಿಗಳು ಹತ್ಯೆ ಮಾಡಿದ್ದಾರೆ’ ಎಂದು ದೂರಿದ್ದರು. ಇದರ ಬೆನ್ನಲ್ಲೇ ಬಾಂಗ್ಲಾದ ಮಧ್ಯಂತರ ಸರ್ಕಾರ ಸ್ಪಷ್ಟನೆ ನೀಡಿದೆ.

‘ಕೊಲೆಯಾದ ವ್ಯಕ್ತಿ ಚಿತಾಗಾರ ಸಮಿತಿಯ ಸದಸ್ಯರಲ್ಲ ಮತ್ತು ಅವರು ಅರ್ಚಕರೂ ಅಲ್ಲ. ಆ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು’ ಎಂದು ಚಿತಾಗಾರದ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಾರಣ ರಾಯ್‌ ಅವರ ಹೇಳಿಕೆಯನ್ನೂ ಸರ್ಕಾರ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.

‘ತರುಣ್‌ ಕುಮಾರ್‌ ಅವರು ಬಾಂಗ್ಲಾದೇಶ ಇಸ್ಕಾನ್‌ ಅಥವಾ ಇತರ ಸಂಘಟನೆಗಳ ಜತೆಗೆ ಗುರುತಿಸಿಕೊಂಡಿಲ್ಲ’ ಎಂದು ಬಾಂಗ್ಲಾದೇಶದ ಇಸ್ಕಾನ್‌ನ ಕಾರ್ಯಕಾರಿ ಸಮಿತಿ ಸದಸ್ಯ ಹೃಷಿಕೇಶ್ ಗೌರಂಗ ದಾಸ್‌ ಅವರ ಹೇಳಿಕೆಯನ್ನು ಅದು ಪೋಸ್ಟ್‌ನಲ್ಲಿ ಉಲ್ಲೇಖ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.