ADVERTISEMENT

ದಿತ್ವಾ ಚಂಡಮಾರುತ: ಶ್ರೀಲಂಕಾದಲ್ಲಿ ಪ್ರವಾಹ; 159 ಮಂದಿ ಸಾವು, 203 ಜನರು ನಾಪತ್ತೆ

ಏಜೆನ್ಸೀಸ್
Published 30 ನವೆಂಬರ್ 2025, 5:11 IST
Last Updated 30 ನವೆಂಬರ್ 2025, 5:11 IST
<div class="paragraphs"><p>ಶ್ರೀಲಂಕಾ ಪ್ರವಾಹ</p></div>

ಶ್ರೀಲಂಕಾ ಪ್ರವಾಹ

   

ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ 'ದಿತ್ವಾ' ಚಂಡಮಾರುತದ ಪರಿಣಾಮ ಜೋರಾಗಿದ್ದು, ಪ್ರವಾಹಕ್ಕೆ ಸಿಲುಕಿ ಇದುವರೆಗೆ 159 ಮಂದಿ ಮೃತಪಟ್ಟಿದ್ದಾರೆ.

ಕೆಲನಿ ನದಿಯಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ. ಹೀಗಾಗಿ, ರಾಜಧಾನಿ ಕೊಲಂಬೊದ ವಿವಿಧೆಡೆ ಪರಿಸ್ಥಿತಿ ತೀವ್ರಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ ಎಂದು ವಿಪತ್ತು ನಿರ್ವಹಣಾ ಕೇಂದ್ರ (ಡಿಎಂಸಿ) ತಿಳಿಸಿದೆ.

ADVERTISEMENT

'ದಿತ್ವಾ' ಚಂಡಮಾರುತವು ಶನಿವಾರ ಕರಾವಳಿಯಿಂದ ದೂರ ಸಾಗಿದೆ. ಆದಾಗ್ಯೂ, ಒಂದು ವಾರ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆ ಸೃಷ್ಟಿಸಿರುವ ಅವಾಂತರದಿಂದಾಗಿ ಇದುವರೆಗೆ ನಾಪತ್ತೆಯಾದವರ ಸಂಖ್ಯೆ 203ಕ್ಕೆ ಏರಿದೆ ಎಂದೂ ಮಾಹಿತಿ ನೀಡಿದೆ.

ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ಅವರು ಶನಿವಾರ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಹಾಗೆಯೇ, ಅಂತರರಾಷ್ಟ್ರೀಯ ಸಮುದಾಯಗಳ ನೆರವು ಕೋರಿದ್ದಾರೆ.

ದೇಶದಾದ್ಯಂತ ಇದುವರೆಗೆ ಸುಮಾರು 20,000ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. 7.8 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಜನರನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ದೇಶದಲ್ಲಿ ಮೂಲ ಸೌಕರ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಡಿಎಂಸಿ ಹೇಳಿದೆ.

2017ರ ನಂತರ ರಾಷ್ಟ್ರದಲ್ಲಿ ತಲೆದೋರಿರುವ ಅತಿದೊಡ್ಡ ನೈಸರ್ಗಿಕ ವಿಪತ್ತು ಇದಾಗಿದೆ. ಆಗ (2017ರಲ್ಲಿ) 200ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. 2003ರಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ವೇಳೆ 254 ಜನರು ಸಾವನ್ನಪ್ಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.