ADVERTISEMENT

ಪಾಕಿಸ್ತಾನದಲ್ಲಿ ಭಾರಿ ಮಳೆಗೆ 63 ಜನ ಸಾವು

ಏಪ್ರಿಲ್‌ನಲ್ಲಿ ಸಾಮಾನ್ಯಕ್ಕಿಂತ ಶೇ 61ರಷ್ಟು ಹೆಚ್ಚು ಮಳೆ

ಎಪಿ
Published 17 ಏಪ್ರಿಲ್ 2024, 21:26 IST
Last Updated 17 ಏಪ್ರಿಲ್ 2024, 21:26 IST
ಪಾಕಿಸ್ತಾನದ ಖೈಬರ್‌ ಪಂಖ್ತುಂಖ್ವಾದ ನೌಶೆರಾ ಜಿಲ್ಲೆಯಲ್ಲಿ ಜಲಾವೃತಗೊಂಡಿರುವ ಪ್ರದೇಶ 
ಪಾಕಿಸ್ತಾನದ ಖೈಬರ್‌ ಪಂಖ್ತುಂಖ್ವಾದ ನೌಶೆರಾ ಜಿಲ್ಲೆಯಲ್ಲಿ ಜಲಾವೃತಗೊಂಡಿರುವ ಪ್ರದೇಶ    

ಪೇಶಾವರ: ಪಾಕಿಸ್ತಾನದಲ್ಲಿ ತೀವ್ರವಾದ ಮಳೆಯಿಂದಾಗಿ ಕಳೆದ ಕೇವಲ 4 ದಿನಗಳಲ್ಲಿ 63 ಜನರು ಸಾವನ್ನಪ್ಪಿದ್ದಾರೆ. ಮಳೆ ಮತ್ತು ಮಿಂಚಿನಿಂದ ಸಂಭವಿಸಿದ ಅವಘಡಗಳಲ್ಲಿ ಮಂಗಳವಾರ 14 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪಾಕಿಸ್ತಾನದ ವಾಯವ್ಯ ದಿಕ್ಕಿನಲ್ಲಿರುವ ಖೈಬರ್‌ ಪಖ್ತೂಂಖ್ವಾ ಪ್ರದೇಶದಲ್ಲಿ ಹೆಚ್ಚಿನ ಸಾವುಗಳು ವರದಿಯಾಗಿವೆ. ಕಟ್ಟಡಗಳು ಕುಸಿದು, 15 ಮಕ್ಕಳು ಮತ್ತು ಐವರು ಮಹಿಳೆಯರು ಸೇರಿದಂತೆ 32 ಜನರು ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದು, 11,370 ಮನೆಗಳಿಗೆ ಹಾನಿಯಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರ ಖುರ್ಷೀದ್‌ ಅನ್ವರ್‌ ತಿಳಿಸಿದ್ದಾರೆ.

ಪಂಜಾಬ್‌ನ ಪೂರ್ವ ಪ್ರಾಂತ್ಯದಲ್ಲಿ ಮಿಂಚು ಮತ್ತು ಕಟ್ಟಡ ಕುಸಿತದಿಂದಾಗಿ 21 ಜನರು ಮೃತಪಟ್ಟಿದ್ದಾರೆ. ತೀವ್ರ ಮಳೆಯಾದ ಬಳಿಕ  ತುರ್ತು ಪರಿಸ್ಥಿತಿ ಘೋಷಿಸಲಾಗಿರುವ ಬಲೂಚಿಸ್ತಾನದಲ್ಲಿ 10 ಜನರು ಸಾವನ್ನಪ್ಪಿದ್ದಾರೆ. ಧಾರಾಕಾರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. 

ADVERTISEMENT

ಹವಾಮಾನ ಬದಲಾವಣೆಯಿಂದಾಗಿ ಏಪ್ರಿಲ್‌ನಲ್ಲಿ ಪಾಕಿಸ್ತಾನದಲ್ಲಿ ತೀವ್ರ ಮಳೆಯಾಗುತ್ತಿದೆ. ಈವರೆಗೆ ಬಲೂಚಿಸ್ತಾನದಲ್ಲಿ ಸಾಮಾನ್ಯಕ್ಕಿಂತ ಶೇ 256 ಪಟ್ಟು ಅಧಿಕ ಮಳೆಯಾಗಿದೆ. ಒಟ್ಟಾರೆಯಾಗಿ ಪಾಕಿಸ್ತಾನದಲ್ಲಿ ಏಪ್ರಿಲ್‌ನಲ್ಲಿ ಸಾಮಾನ್ಯಕಕ್ಕಿಂತ ಶೇ 61ರಷ್ಟು ಹೆಚ್ಚು ಮಳೆ ಸುರಿದಿದೆ. ದೇಶದಲ್ಲಿ ಈಗಾಗಲೇ ಹವಾಮಾನ ಬದಲಾವಣೆಯಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಅಧಿಕಾರಿ ಜಮೀರ್‌ ಅಹ್ಮದ್‌ ಬಾಬರ್‌ ತಿಳಿಸಿದ್ದಾರೆ. 

ಹಿಮಾಲಯದ ವಿವಾದಿತ ಕಾಶ್ಮೀರ ಪ್ರದೇಶದಲ್ಲಿಯೂ ಹೆಚ್ಚು ಮಳೆ ಸುರಿಯುತ್ತಿದೆ. 2022ರಲ್ಲಿ ಮಳೆಯಿಂದಾಗಿ ನದಿಗಳ ನೀರು ಹೆಚ್ಚಾಗಿ ಪಾಕಿಸ್ತಾನದ ಮೂರನೇ ಒಂದು ಭಾಗದಲ್ಲಿ ಪ್ರವಾಹ ಉಂಟಾಯಿತು. 1,739 ಜನರು ಸಾವನ್ನಪ್ಪಿದರು. 

ನೆರೆಯ ಅಫ್ಗಾನಿಸ್ತಾನದಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ 33 ಜನರು ಸಾವನ್ನಪ್ಪಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.