ADVERTISEMENT

ಕ್ಷಿಪಣಿ ದಾಳಿ: ಉಕ್ರೇನ್‌ನಲ್ಲಿ 25 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 16:11 IST
Last Updated 15 ಜನವರಿ 2023, 16:11 IST
   

ನಿಪ್ರೊ/ಮಾಸ್ಕೊ(ಎಪಿ/ಎಎಫ್‌ಪಿ/ರಾಯಿಟರ್ಸ್‌): ಉಕ್ರೇನ್‌ನ ನಿಪ್ರೊ ನಗರದ ಗೋಪುರ ಅ‍ಪಾರ್ಟ್‌ಮೆಂಟ್‌ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ನಾಗರಿಕರ ಸಾವಿನ ಸಂಖ್ಯೆ ಭಾನುವಾರ 25ಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 39 ಮಂದಿಯನ್ನು ರಕ್ಷಿಸಲಾಗಿದೆ.

ಶನಿವಾರ ತಡ ರಾತ್ರಿ ರಷ್ಯಾ ಕರ್ಸ್ಕ್‌ ಪ್ರದೇಶದಿಂದ ಹಾರಿಸಿದ ಕೆಎಚ್‌ –22 ಕ್ಷಿಪಣಿಯು ಸುಮಾರು 1,700 ನಿವಾಸಿಗಳು ವಾಸವಿದ್ದ ಅ‍ಪಾರ್ಟ್‌ಮೆಂಟ್‌ಗೆ ಅಪ್ಪಳಿಸಿದೆ. 43 ಜನರು ಕಾಣೆಯಾಗಿದ್ದು, 73 ಮಂದಿಗೆ ಗಾಯಗಳಾಗಿವೆ. ರಷ್ಯಾ ಉಡಾಯಿಸಿದ 33 ಕ್ಷಿಪಣಿಗಳ ಪೈಕಿ 21 ಕ್ಷಿಪಣಿ ನಾಶಪಡಿಸಲಾಯಿತು ಎಂದು ಉಕ್ರೇನ್‌ ಸೇನಾಪಡೆ ಮುಖ್ಯಸ್ಥ ಜನರಲ್‌ ವೆಲೇರಿ ಝಲುಝ್ನಿ ಹೇಳಿದ್ದಾರೆ.

ಸಕಾರಾತ್ಮಕ ಮುನ್ನಡೆ: ಪುಟಿನ್‌ ಪ್ರಶಂಸೆ

ADVERTISEMENT

ಕ್ಷಿಪಣಿ ದಾಳಿಯಿಂದ ಉಕ್ರೇನ್‌ಗೆ ಅಪಾರ ಹಾನಿ ಮಾಡಿ, ಉಪ್ಪುಗಣಿಯ ಸೊಲೆದಾರ್‌ ನಗರ ವಶಪಡಿಸಿಕೊಂಡ ನಂತರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಅವರು ಭಾನುವಾರ ತಮ್ಮ ಸೇನಾಪಡೆಗಳು ‘ಸಕಾರಾತ್ಮಕ ಮುನ್ನಡೆ’ ಸಾಧಿಸಿವೆ ಎಂದು ಶ್ಲಾಘಿಸಿದರು.

ಸ್ಫೋಟ: ಮೂವರ ಸಾವು

ರಷ್ಯಾದ ಬೆಲ್ಗೊರೊಡ್‌ನಲ್ಲಿ ಸೇನಾ ನೆಲೆಗಳು ಮತ್ತು ತರಬೇತಿ ಮೈದಾನದ ಸಮೀಪವೇ ಭಾನುವಾರ ಮದ್ದುಗುಂಡು ಸ್ಫೋಟವಾಗಿ ಮೂವರು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ ಎಂದು ‘ರಿಯಾ ನೊವೊಸ್ಟಿ’ ಸುದ್ದಿಸಂಸ್ಥೆ ವರದಿ ಮಾಡಿದೆ. ಗ್ರೆನೇಡ್‌ ನಿರ್ವಹಣೆಯಲ್ಲಿ ಯೋಧರೊಬ್ಬರು ಎಸಗಿದ ಲೋಪದಿಂದ ಸ್ಫೋಟ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.