ADVERTISEMENT

ಟ್ರಂಪ್ ಎದುರಾಳಿ ಯಾರು?: ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹೆಸರು ಇಂದು ನಿರ್ಧಾರ

ಏಜೆನ್ಸೀಸ್
Published 2 ಮಾರ್ಚ್ 2020, 20:10 IST
Last Updated 2 ಮಾರ್ಚ್ 2020, 20:10 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್: ಅಮೆರಿಕದವರಿಗೆ ಈಗ ಸೂಪರ್‌ ಮಂಗಳವಾರದ ಕೂತೂಹಲ! ನವೆಂಬರ್‌ ತಿಂಗಳಲ್ಲಿ ನಡೆಯುವ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಎದುರಿಸಲಿರುವ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಯಾರೆಂಬುದು ಮಂಗಳವಾರ ಇತ್ಯರ್ಥವಾಗಲಿದೆ ಎಂಬುದೇ ಇದಕ್ಕೆ ಕಾರಣ.

ಅಮೆರಿಕ ಸಂಯುಕ್ತ ಸಂಸ್ಥಾನದ 50 ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳು ಈಗಾಗಲೇ ತಮ್ಮ ಹಕ್ಕು ಚಲಾಯಿಸಿವೆ. ಆದರೆ ಮಾರ್ಚ್‌ 3ರ ಮಂಗಳವಾರ ನಿರ್ಣಾಯಕ ದಿನ. ಅಂದು ಲಕ್ಷಾಂತರ ಅರ್ಹ ಮತದಾರರು ಸಂಪೂರ್ಣವಾಗಿ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.

ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿರುವ ಬೆರ್ನಿ ಸ್ಯಾಂಡರ್ಸ್‌ ಮುನ್ನಡೆ ಸಾಧಿಸುವರೋ ಅಥವಾ ಮಾಜಿ ಉಪಾಧ್ಯಕ್ಷ ಜೋ ಬಿಡೆನ್‌ ದಿಢೀರನೇ ಸ್ಪರ್ಧೆಗೆ ಮರಳುವರೋ ಎಂಬ ಕುತೂಹಲವಿದೆ.

ADVERTISEMENT

ಅಮೆರಿಕ ಸಂಯುಕ್ತ ಸಂಸ್ಥಾನದ 14 ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು ವಿದೇಶಗಳಲ್ಲಿ ಇರುವ ಅಮೆರಿಕ ಸಂಜಾತರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತಗಳ ಎಣಿಕೆ ಪ್ರಕ್ರಿಯೆ ಇಡೀ ರಾತ್ರಿ ನಡೆಯುವ ನಿರೀಕ್ಷೆಯಿದೆ.

ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪ್ರತಿನಿಧಿಗಳು ನಿರ್ಧರಿಸುತ್ತಾರೆ. ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಆಕಾಂಕ್ಷಿಯು 1,991 ಪ್ರತಿನಿಧಿಗಳ ಬೆಂಬಲ ಪಡೆಯುವುದು ಅಗತ್ಯ.

ಈವರೆಗೆ ನಡೆದ ಮತದಾನದಲ್ಲಿ ಸ್ಯಾಂಡರ್ಸ್‌ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಕ್ಯಾಲಿಫೋರ್ನಿಯಾ (415) ಮತ್ತು ಟೆಕ್ಸಾಸ್‌ನಲ್ಲಿ (228) ಪ್ರತಿನಿಧಿಗಳ ಬೆಂಬಲ ದೊರೆತಿದೆ.

ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಜುಲೈ 13–14ರಂದು ನಡೆಯಲಿರುವ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಕಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.