ಗೋಮಾ (ಕಾಂಗೊ): ರುವಾಂಡ, ಫ್ರಾನ್ಸ್, ಬೆಲ್ಜಿಯಂ ಸೇರಿದಂತೆ ಹಲವು ದೇಶಗಳ ರಾಯಭಾರ ಕಚೇರಿ ಮೇಲೆ ಪ್ರತಿಭಟನಕಾರರು ಮಂಗಳವಾರ ದಾಳಿ ನಡೆಸಿದರು.
ರುವಾಂಡ ಬೆಂಬಲಿತ ಎಂ23 ಬಂಡುಕೋರರು ದೇಶದ ಪೂರ್ವ ಗಡಿಯ ಸಂಘರ್ಷಪೀಡಿತ ಪ್ರಮುಖ ನಗರವನ್ನು ವಶಪಡಿಸಿಕೊಳ್ಳಲು ಯತ್ನಿಸಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ಮಾಡಿದರು.
ಪ್ರತಿಭಟನಕಾರರು ಕಿನ್‌ಶ್ಯಾಸ ರಾಯಭಾರ ಕಚೇರಿಯತ್ತ ಧಾವಿಸಿ ಕಟ್ಟಡದ ಕೆಲವು ಭಾಗಗಳಿಗೆ ಬೆಂಕಿ ಇಟ್ಟರು, ಲೂಟಿ ಮಾಡಿದರು. ಕೇನ್ಯಾ ಮತ್ತು ಉಗಾಂಡ ರಾಜತಾಂತ್ರಿಕ ಕಚೇರಿಗಳ ಮೇಲೂ ದಾಳಿ ನಡೆಸಿದರು. ನಂತರ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಕಾರರನ್ನು ಚದುರಿಸಿದರು.
ಬಂಡುಕೋರರು ಗೋಮಾ ನಗರಕ್ಕೆ ಲಗ್ಗೆ ಇಡುವುದನ್ನು ತಡೆಯಲು ದೇಶದ ಭದ್ರತಾ ಪಡೆಗಳು ಯತ್ನಿಸಿದ್ದವು.
‘ಅಂತರರಾಷ್ಟ್ರೀಯ ಸಮುದಾಯದ ಇಬ್ಬಗೆ ನೀತಿಯನ್ನು ನಾವು ಖಂಡಿಸುತ್ತೇವೆ. ಈ ಸಾಹಸವನ್ನು ನಿಲ್ಲಿಸುವಂತೆ ರುವಾಂಡಗೆ ಸೂಚನೆ ನೀಡಬೇಕು’ ಎಂದು ಪ್ರತಿಭಟನಕಾರರೊಬ್ಬರು ಒತ್ತಾಯಿಸಿದರು.
‘ನಗರದಲ್ಲಿ ಬೆಳಿಗ್ಗೆಯಿಂದ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯ ಸದ್ದು ಕಿವಿಗೆ ಅಪ್ಪಳಿಸುತ್ತಿದೆ. ನಗರವು ಯಾರ ಹಿಡಿತದಲ್ಲಿದೆ ಎಂದು ಇನ್ನೂ ತಿಳಿಯುತ್ತಿಲ್ಲ’ ಎಂದು ನಿವಾಸಿ ಸ್ಯಾಮ್ ಲುವಾವಾ ಹೇಳಿದರು.
ಎಂ23 ಬಂಡುಕೋರರು ಸುಮಾರು 100 ಮಂದಿಯನ್ನು ಒಳಗೊಂಡಿರುವ ಸಶಸ್ತ್ರ ಗುಂಪು. ಇದು ಆಫ್ರಿಕಾದ ಖನಿಜ-ಸಮೃದ್ಧ ಪ್ರದೇಶವಾಗಿರುವ ಗೋಮಾವನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.