ADVERTISEMENT

ದಿತ್ವಾ ಅಬ್ಬರ: ಶ್ರೀಲಂಕಾದಲ್ಲಿ 334 ಮಂದಿ ಸಾವು; 20,000 ಮನೆಗಳಿಗೆ ಹಾನಿ

ಏಜೆನ್ಸೀಸ್
Published 30 ನವೆಂಬರ್ 2025, 14:17 IST
Last Updated 30 ನವೆಂಬರ್ 2025, 14:17 IST
<div class="paragraphs"><p>ದಿತ್ವಾ ಚಂಡಮಾರುತದ ಪರಿಣಾಮ ಮರೀನಾ ಬೀಚ್‌ನಲ್ಲಿ ಮೀನುಗಾರಿಕಾ ಬೋಟ್‌ಗಳು ಭಾನುವಾರ ಲಂಗರು ಹಾಕಿದ್ದವು</p></div>

ದಿತ್ವಾ ಚಂಡಮಾರುತದ ಪರಿಣಾಮ ಮರೀನಾ ಬೀಚ್‌ನಲ್ಲಿ ಮೀನುಗಾರಿಕಾ ಬೋಟ್‌ಗಳು ಭಾನುವಾರ ಲಂಗರು ಹಾಕಿದ್ದವು

   

– ಪಿಟಿಐ ಚಿತ್ರ

ಕೊಲಂಬೊ:  ‘ದಿತ್ವಾ’ ಚಂಡಮಾರುತದ ಪ್ರಭಾವದಿಂದಾಗಿ ಶ್ರೀಲಂಕಾದ ತಗ್ಗು ಪ್ರದೇಶಗಳಲ್ಲಿ ಭಾನುವಾರವೂ ಪ್ರವಾಹ ಪರಿಸ್ಥಿತಿ ಮುಂದುವರಿದಿತ್ತು. ಭಾರಿ ಮಳೆ ಮತ್ತು ಅದಕ್ಕೆ ಸಂಬಂಧಿಸಿದ ಅವಘಡಗಳಿಂದಾಗಿ ಕನಿಷ್ಠ 334 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ವರುಣಾರ್ಭಟದಿಂದಾಗಿ ಮರಗಳು ಧರೆಗೆ ಉರುಳಿವೆ, ರಸ್ತೆಗಳು ಜಲಾವೃತವಾಗಿ ಸಂಚಾರ ಬಂದ್‌ ಆಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸಿಬ್ಬಂದಿ ಮರಗಳನ್ನು ತೆರವುಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

‘ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕನಿಷ್ಠ 334 ಮಂದಿ ಮೃತಪಟ್ಟಿದ್ದಾರೆ ಮತ್ತು 218 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ವಿಪತ್ತು ನಿರ್ವಹಣಾ ಕೇಂದ್ರವು (ಡಿಎಂಸಿ) ತಿಳಿಸಿದೆ.

‘2.73 ಲಕ್ಷ ಕುಟುಂಬಗಳ 9.98 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ಮಳೆಯಿಂದಾಗಿ 20,000 ಮನೆಗಳಿಗೆ ಹಾನಿಯಾಗಿದೆ. 1.22 ಲಕ್ಷ  ಜನರು ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಉಳಿದ 8.33 ಲಕ್ಷ ಮಂದಿಗೆ ನೆರವಿನ ಅಗತ್ಯವಿದೆ’ ಎಂದು ಡಿಎಂಸಿ ಹೇಳಿದೆ.

ಕೆಲಾನಿ ನದಿಯ ನೀರಿನ ಮಟ್ಟ ಶನಿವಾರದಿಂದ ಏರಿಕೆಯಾಗುತ್ತಿರುವ ಕಾರಣ ಕೊಲಂಬೊದ ಉತ್ತರ ಭಾಗವು ಜಲಾವೃತಗೊಂಡಿದ್ದು, ಜನರ ಸ್ಥಳಾಂತರಕ್ಕೆ ಆದೇಶ ಹೊರಡಿಸಲಾಗಿದೆ.

ಭಾರತದ ಹೆಲಿಕಾಪ್ಟರ್‌ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಭಾನುವಾರ 24 ಮಂದಿಯನ್ನು ರಕ್ಷಿಸಿದೆ. ಪಾಕಿಸ್ತಾನ, ಜಪಾನ್‌ ಸಹ ರಕ್ಷಣಾ ತಂಡವನ್ನು ಕಳುಹಿಸಿವೆ ಎಂದು ಶ್ರೀಲಂಕಾ ವಾಯುಪಡೆಯು ತಿಳಿಸಿದೆ.

ಚಂಡಮಾರುತವು ಬೇರೆ ದಿಕ್ಕಿನತ್ತ ಮುಖ ಮಾಡಿದ್ದರೂ ಕೊಲಂಬೊದಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸಲು ಕನಿಷ್ಠ ಒಂದು ದಿನ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೊಲಂಬೊ ತಲುಪಿದ ಸಿ–130ಜೆ

ಪ್ರವಾಹದಲ್ಲಿ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವು ನೀಡಲು ‘ಆಪರೇಷನ್‌ ಸಾಗರ ಬಂಧು’ ಕಾರ್ಯಾಚರಣೆಯ ಭಾಗವಾಗಿ ನೆರವಿನ ಸಾಮಗ್ರಿ ಹೊತ್ತ ಸಿ–130ಜೆ ವಿಮಾನವನ್ನು ಭಾರತೀಯ ವಾಯುಪಡೆಯು ಶ್ರೀಲಂಕಾಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು. ತ್ವರಿತ ಪರಿಹಾರ ಕಾರ್ಯಾಚರಣೆಗಾಗಿ ಶ್ರೀಲಂಕಾ ರಾಜಧಾನಿಯಲ್ಲಿ ಎಂಐ 17 ಹೆಲಿಕಾಪ್ಟರ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದರು. ‘ಕೊಲಂಬೊದಲ್ಲಿ ನಿಯೋಜಿತವಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್‌ಡಿಆರ್‌ಎಫ್‌) ತಂಡಕ್ಕೆ ಅಗತ್ಯವಿರುವ ಸಾಧನಗಳನ್ನು ಹೊತ್ತೊಯ್ದ ವಿಮಾನವು ಭಾನುವಾರ ಅಲ್ಲಿಗೆ ತಲುಪಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಅತಂತ್ರರಾಗಿರುವ ಭಾರತೀಯರನ್ನು ಈ ವಿಮಾನದ ಮೂಲಕ ವಾಪಸ್‌ ಕರೆತರಲಾಗುತ್ತದೆ ಎಂದರು.

ತಮಿಳುನಾಡಿನಲ್ಲಿ ಮೂವರು ಸಾವು

‘ದಿತ್ವಾ’ ಚಂಡಮಾರುತದಿಂದಾಗಿ ತಮಿಳುನಾಡಿದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದರೆ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಮತ್ತೊಬ್ಬ ಯುವಕ ಮೃತಪಟ್ಟಿದ್ದಾರೆ. ‘ಭಾರಿ ಮಳೆಯಿಂದಾಗಿ 234 ಜೋಪಡಿಗಳಿಗೆ ಹಾನಿಯಾಗಿದೆ 149 ಜಾನುವಾರುಗಳು ಮೃತಪಟ್ಟಿವೆ ಮತ್ತು ಡೆಲ್ಟಾ ಜಿಲ್ಲೆಗಳ (ಕಾವೇರಿ ಜಲಾನಯನ ಪ್ರದೇಶ) 57000 ಹೆಕ್ಟೇರ್‌ ಕೃಷಿ ಜಮೀನುಗಳಿಗೆ ಹಾನಿಯಾಗಿದೆ’ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣೆ ಸಚಿವ ಕೆ.ಕೆ.ಎಸ್.ಎಸ್‌.ಆರ್‌ ರಾಮಚಂದ್ರನ್‌ ಅವರು ಸುದ್ದಿಗಾರರಿಗೆ ತಿಳಿಸಿದರು. ‘ನಾಗಪಟ್ಟಣಂನ 24000 ಹೆಕ್ಟೇರ್‌ ತಿರುವರೂರ್‌ನ 15000 ಹೆಕ್ಟೇರ್‌ ಮೈಲಾಡುಥುರೈನ 8000 ಹೆಕ್ಟೇರ್‌ ಸೇರಿ ಒಟ್ಟು 57000 ಹೆಕ್ಟೇರ್ ಕೃಷಿ ಜಮೀನುಗಳು ಹಾನಿಗೊಳಗಾಗಿವೆ’ ಎಂದರು. ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳ 28 ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಸಿದ್ಧವಿವೆ. ಇತರ ರಾಜ್ಯಗಳ 10 ಹೆಚ್ಚುವರಿ ತಂಡಗಳು ರಾಜ್ಯಕ್ಕೆ ಬರಲಿವೆ. ಸರ್ಕಾರವು ನಿಯಂತ್ರಣ ಕೊಠಡಿಗಳ ಮೂಲಕ ಜಿಲ್ಲಾಡಳಿತಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದರು.

ಗರಿಷ್ಠ ಮಳೆ:

ಈ ಮಧ್ಯೆ ಪುದುಚೇರಿಯ ಕಾರೈಕಲ್‌ನಲ್ಲಿ 24 ತಾಸಿನಲ್ಲಿ ಗರಿಷ್ಠ 19 ಸೆಂ.ಮೀ ಮಳೆಯಾಗಿದೆ ಸೆಂಬನಾರ್‌ಕೊಯಿಲ್‌ನಲ್ಲಿ 17 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.