
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಪ್ರತಿಸುಂಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು 90 ದಿನ ತಡೆಹಿಡಿಯುವಂತೆ ಟ್ರಂಪ್ ಆಡಳಿತವು ಸಲ್ಲಿಸಿದ್ದ ಮೇಲ್ಮನವಿಯನ್ನು ಫೆಡರಲ್ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.
ಇದರಿಂದಾಗಿ, ಶತಕೋಟಿ ಡಾಲರ್ ಮೌಲ್ಯದ ಪ್ರತಿಸುಂಕ ಮರುಪಾವತಿಯನ್ನು ನಿಧಾನಗೊಳಿಸುವ ಟ್ರಂಪ್ ಆಡಳಿತದ ಪ್ರಯತ್ನಕ್ಕೆ ಪೆಟ್ಟುಬಿದ್ದಂತಾಗಿದೆ.
ಅಮೆರಿಕದ ಮೇಲ್ಮನವಿ ನ್ಯಾಯಾಲಯವು ಮರುಪಾವತಿ ಪ್ರಕ್ರಿಯೆಯಲ್ಲಿನ ಮುಂದಿನ ಹಂತವನ್ನು ನಿರ್ವಹಿಸುವಂತೆ ಸೂಚಿಸಿ, ಪ್ರಕರಣವನ್ನು ಕೆಳ ನ್ಯಾಯಾಲಯಕ್ಕೆ ವರ್ಗಾಯಿಸಿತು.
ಇದೀಗ ನ್ಯೂಯಾರ್ಕ್‌ನಲ್ಲಿರುವ ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯವು, ಮರುಪಾವತಿ ಪ್ರಕ್ರಿಯೆಯನ್ನು ಹೇಗೆ ಮುಂದುವರಿಸಬೇಕು ಎಂಬುದನ್ನು ನಿರ್ಧರಿಸಲಿದೆ.
ಜಗತ್ತಿನ ವಿವಿಧ ದೇಶಗಳ ಮೇಲೆ ಟ್ರಂಪ್ ಆಡಳಿತವು ಹೇರಿದ್ದ ಹೆಚ್ಚುವರಿ ಪ್ರತಿಸುಂಕವು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಫೆ. 20ರಂದು ತೀರ್ಪು ನೀಡಿತ್ತು.
‘ಪೆನ್ ವಾರ್ಟನ್ ಬಜೆಟ್ ಮಾಡೆಲ್’ ಅರ್ಥಶಾಸ್ತ್ರಜ್ಞರು ಅಂದಾಜಿಸಿದ ಪ್ರಕಾರ ಟ್ರಂಪ್ ಆಡಳಿತವು ಕಳೆದ ಡಿಸೆಂಬರ್ 14ರಿಂದ, 175 ಬಿಲಿಯನ್ ಡಾಲರ್ (ಅಂದಾಜು ₹15.89 ಲಕ್ಷ ಕೋಟಿ) ಸುಂಕ ಸಂಗ್ರಹಿಸಿದೆ. ಇದರ ಮರುಪಾವತಿ ಬಗ್ಗೆ ಸುಪ್ರೀಂ ಕೋರ್ಟ್ ಯಾವುದೇ ಮಾರ್ಗದರ್ಶನ ನೀಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.