ADVERTISEMENT

ಟ್ರಂಪ್‌ ವಿರುದ್ಧ ವಾಗ್ದಾಂಡನೆ: ಸೆನೆಟ್‌ನಲ್ಲಿ ಫೆ.8ರಿಂದ ವಿಚಾರಣೆ ಪ್ರಕ್ರಿಯೆ

ಪಿಟಿಐ
Published 23 ಜನವರಿ 2021, 6:27 IST
Last Updated 23 ಜನವರಿ 2021, 6:27 IST
.
.   

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ದಾಂಡನೆ ಪ್ರಕ್ರಿಯೆಯನ್ನು ಫೆಬ್ರುವರಿ 8ರಿಂದ ಸೆನೆಟ್‌ ಆರಂಭಿಸಲಿದೆ.

100 ಸದಸ್ಯರನ್ನೊಳಗೊಂಡ ಸೆನೆಟ್‌ನಲ್ಲಿ ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ ಪಕ್ಷದ ತಲಾ 50 ಸದಸ್ಯರಿದ್ದಾರೆ. ಆದರೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರೇ ಸೆನೆಟ್‌ ಚೇರಮನ್‌ ಆಗಿದ್ದಾರೆ. ಹೀಗಾಗಿ, ಕಮಲಾ ಹ್ಯಾರಿಸ್‌ ಅವರಿಗಿರುವ ಮತದಿಂದ ಡೆಮಾಕ್ರಟಿಕ್‌ ಪಕ್ಷಕ್ಕೆ ಬಹುಮತ ದೊರೆಯಲಿದೆ.

ವಾಗ್ದಾಂಡನೆ ಪ್ರಕ್ರಿಯೆ ವಿವರಿಸಿದ ಸೆನೆಟ್‌ ನಾಯಕ ಚುಕ್‌ ಶುಮರ್‌, ಸೋಮವಾರ ವಾಗ್ದಾಂಡನೆ ಕುರಿತು ಪ್ರಕ್ರಿಯೆ ಆರಂಭಿಸುವಂತೆ ಸದನದ ನಾಯಕರು ಕೋರಲಿದ್ದಾರೆ. ಬಳಿಕ, ಈ ಹಿಂದೆ ವಿಚಾರಣೆಗಳು ನಡೆದಂತೆ ಕಾನೂನುಬದ್ಧ ವಾದಮಂಡಿಸಲು ಸಿದ್ಧತೆಗಳನ್ನು ಕೈಗೊಳ್ಳಲು ಕಾಲಾವಕಾಶ ದೊರೆಯಲಿದೆ. ಫೆಬ್ರುವರಿ 8ರವರೆಗೆ ಇತರ ವಿಷಯಗಳ ಬಗ್ಗೆಯೂ ಕಲಾಪ ನಡೆಯಲಿವೆ ಎಂದು ತಿಳಿಸಿದ್ದಾರೆ.

ADVERTISEMENT

ಫೆಬ್ರುವರಿ 11ರಿಂದ ವಾಗ್ದಾಂಡನೆ ಪ್ರಕ್ರಿಯೆ ಆರಂಭಿಸುವಂತೆ ರಿಪಬ್ಲಿಕನ್‌ ನಾಯಕರು ಒತ್ತಾಯಿಸಿದ್ದರು. ಆದರೆ, ಆಡಳಿತಾರೂಢ ಡೆಮಾಕ್ರಟಿಕ್‌ ಪಕ್ಷ ಒಪ್ಪಿಗೆ ನೀಡಲಿಲ್ಲ.

ಹೌಸ್ ಆಫ್ ರೆಪ್ರಸೆಂಟೆಟೀವ್ಸ್‌ನಲ್ಲಿ ನಡೆದಿರುವ ವಾಗ್ದಾಂಡನೆ ಪ್ರಕ್ರಿಯೆ ವಿವರಗಳನ್ನು ಸೋಮವಾರ ಸೆನೆಟ್‌ಗೆ ಸಲ್ಲಿಸಲಾಗುವುದು ಎಂದು ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತಿಳಿಸಿದ್ದಾರೆ.

ಅಮೆರಿಕ ಸಂಸತ್ತಿನ ಹೌಸ್ ಆಫ್ ರೆಪ್ರಸೆಂಟೆಟೀವ್ಸ್‌ನಲ್ಲಿ ಟ್ರಂಪ್‌ ವಿರುದ್ಧ ಮಂಡಿಸಿದ್ದ ವಾಗ್ದಾಂಡನೆ ನಿಲುವಳಿಗೆ ಒಪ್ಪಿಗೆ ನೀಡಲಾಗಿದೆ. ವಾಗ್ದಂಡನೆ ಪರವಾಗಿ 232 ಮತಗಳು ಬಿದ್ದರೆ ವಿರುದ್ಧವಾಗಿ 197 ಮತಗಳು ಚಲಾವಣೆಯಾಗಿದ್ದವು. ಇದೀಗ ವಾಗ್ದಂಡನೆ ನಿಲುವಳಿ ಬಗ್ಗೆ ಸೆನೆಟ್ ನಿರ್ಣಯ ಕೈಗೊಳ್ಳಬೇಕಾಗಿದೆ.

ಸೆನೆಟ್‌ನಲ್ಲಿಯೂ ವಾಗ್ದಂಡನೆಗೆ ಜಯ ಸಿಕ್ಕರೆ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಡೊನಾಲ್ಡ್‌ ಟ್ರಂಪ್‌ ಕಳೆದುಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.