ವ್ಯಾನ್ಸ್, ಉಷಾ ಚಿಲುಕುರಿ, ಡೊನಾಲ್ಡ್ ಟ್ರಂಪ್
ಬೆಂಗಳೂರು: ಅಮೆರಿಕದ ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೆ.ಡಿ. ವ್ಯಾನ್ಸ್ ಅವರು ಸೋಮವಾರ ಕ್ಯಾಪಿಟಲ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಈ ವೇಳೆ ವ್ಯಾನ್ಸ್ ಅವರ ಪತ್ನಿ ಭಾರತ ಮೂಲದ ಉಷಾ ಚಿಲುಕುರಿ ವ್ಯಾನ್ಸ್ ಅವರು ಸಾಕಷ್ಟು ಗಮನ ಸೆಳೆದರು.
ಈ ಕಾರ್ಯಕ್ರಮದಲ್ಲಿನ ವ್ಯಾನ್ಸ್ ಮತ್ತು ಉಷಾ ಅವರ ಫೋಟೊಗಳನ್ನು ಎನ್‌ಆರ್‌ಐಗಳು, ಭಾರತೀಯರು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಭಾರತೀಯರಿಗೆ ಇದೊಂದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದ ವೇದಿಕೆಗೆ ವ್ಯಾನ್ಸ್ ಜೊತೆ ಬಂದ ಉಷಾ ಚಿಲುಕುರಿ ಆಕರ್ಷಕ ಗುಲಾಬಿ ಬಣ್ಣದ ಗೌನ್‌ನಲ್ಲಿ ಕಂಗೊಳಿಸುತ್ತಿದ್ದರು.
ಉಷಾ ಚಿಲುಕುರಿ ಅವರು ತೆಲುಗು ವಲಸಿಗರ ಮಗಳು. ಚಿಲುಕುರಿ ಕುಟುಂಬದ ಮೂಲ ಇರುವುದು ಪಶ್ಚಿಮ ಗೋದಾವರಿ ಜಿಲ್ಲೆಯ ಸಣ್ಣ ಗ್ರಾಮ ವಡ್ಲೂರಿನಲ್ಲಿ.
ತಮ್ಮ ಜೀವನ ಪಯಣದಲ್ಲಿ ಉಷಾ ಅವರು ನೀಡಿರುವ ಬೆಂಬಲವನ್ನು ವ್ಯಾನ್ಸ್ ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಉಷಾ ಅವರ ಭಾರತ ಮೂಲ ಹಾಗೂ ಭಾರತೀಯ ಮೌಲ್ಯಗಳನ್ನು ಅವರು ಅಳವಡಿಸಿಕೊಂಡಿರುವ ಬಗ್ಗೆ ವ್ಯಾನ್ಸ್ ಅವರು ಚುನಾವಣಾ ಸಮಯದಲ್ಲಿ ಬಹಳ ಮೆಚ್ಚುಗೆಯ ಮಾತನಾಡಿದ್ದರು.
ಉಷಾ ಅವರ ಅಪ್ಪ ಚಿಲುಕುರಿ ರಾಧಾಕೃಷ್ಣ ಮತ್ತು ಅಮ್ಮ ಲಕ್ಷ್ಮಿ ಅವರು 1980ರಲ್ಲಿ ಅಮೆರಿಕಕ್ಕೆ ವಲಸೆ ಹೋದರು. ಸ್ಯಾನ್ ಡಿಯಾಗೊ ನಗರದ ಹೊರವಲಯದಲ್ಲಿ ಬೆಳೆದ ಉಷಾ ಅವರು ಮೌಂಟ್ ಕಾರ್ಮೆಲ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ಅವರು ಕಾನೂನು ಪದವಿ ಪಡೆದು, ವಕೀಲೆ ಆದರು. ಉಷಾ ಅವರ ತಾಯಿ ಜೀವವಿಜ್ಞಾನಿ, ತಂದೆ ಎಂಜಿನಿಯರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.