
ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇತೃತ್ವದಲ್ಲಿ ‘ಶಾಂತಿ ಮಂಡಳಿ’ಯೊಂದನ್ನು ರಚಿಸಲು ಅಮೆರಿಕ ಮುಂದಾಗಿದೆ. ಅದಕ್ಕೆ ಸೇರಲು ಬಯಸುವ ದೇಶಗಳು 1 ಬಿಲಿಯನ್ ಡಾಲರ್ ನೀಡಬೇಕಾಗಿದೆ ಎಂದು ಬ್ರೂಮ್‌ಬರ್ಗ್ ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಅವರು ‘ಶಾಂತಿ ಮಂಡಳಿ’ಯ ಸಂಸ್ಥಾಪಕ ಅಧ್ಯಕ್ಷರಾಗಲಿದ್ದಾರೆ. ಈ ಮಂಡಳಿಗೆ ಸೇರಲಿರುವ ರಾಷ್ಟ್ರಗಳಿಗೆ 3 ವರ್ಷದ ಸದಸ್ಯತ್ವ ಸಿಗಲಿದೆ. ಅದನ್ನು ನವೀಕರಣ ಮಾಡುವ ಅಧಿಕಾರವು ಅಧ್ಯಕ್ಷರಿಗಿದೆ ಎಂದು ವರದಿಯಲ್ಲಿದೆ.
ಆದರೆ ಈ ವರದಿಯನ್ನು ಶ್ವೇತಭವನವು ತಳ್ಳಿಹಾಕಿದೆ. ‘ಬ್ರೂಮ್‌ಬರ್ಗ್ ವರದಿಯು ಸತ್ಯಕ್ಕೆ ದೂರವಾಗಿದ್ದು, ಜನರನ್ನು ದಾರಿತಪ್ಪಿಸುತ್ತಿದೆ. ಶಾಂತಿ ಮಂಡಳಿ ಸದಸ್ಯತ್ವ ಪಡೆಯಲು ಯಾವುದೇ ನಿರ್ದಿಷ್ಟ ಮೊತ್ತವನ್ನು ನೀಡಬೇಕಾಗಿಲ್ಲ’ ಎಂದು ಅದು ತಿಳಿಸಿದೆ.
‘ಜಗತ್ತಿನ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಬಯಸುವ ದೇಶಗಳಿಗೆ ‘ಶಾಂತಿ ಮಂಡಳಿ’ಯ ಶಾಶ್ವತ ಸದಸ್ಯತ್ವವನ್ನು ನೀಡಲಾಗುತ್ತದೆ’ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶ್ವೇತಭವನದ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.