ADVERTISEMENT

ತಮ್ಮದೇ ಸೋಷಿಯಲ್ ಮೀಡಿಯಾ ಆರಂಭಿಸಲು ಮುಂದಾದ ಡೊನಾಲ್ಡ್ ಟ್ರಂಪ್

ರಾಯಿಟರ್ಸ್
Published 22 ಮಾರ್ಚ್ 2021, 2:36 IST
Last Updated 22 ಮಾರ್ಚ್ 2021, 2:36 IST
ಡೊನಾಲ್ಡ್ ಟ್ರಂಪ್: ಎಎಫ್‌ಪಿ ಚಿತ್ರ
ಡೊನಾಲ್ಡ್ ಟ್ರಂಪ್: ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಹಿಲ್ಸ್ ಮೇಲೆ ನಡೆದ ದಾಳಿ ಬಳಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅಮಾನತುಗೊಳಿಸಲಾಗಿತ್ತು. ಹಾಗಾಗಿ, ಇದೀಗ, ತಮ್ಮ ಬೆಂಬಲಿಗರನ್ನು ತಲುಪಲು ಟ್ರಂಪ್ ತಮ್ಮದೇ ಆದ ಸಾಮಾಜಿಕ ಮಾಧ್ಯಮ ವೇದಿಕೆ ರಚನೆಗೆ ಮುಂದಾಗಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ಮೂರು ತಿಂಗಳಲ್ಲಿ ತಮ್ಮದೇ ಆದ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ ಎಂದು ಅವರ ಹಿರಿಯ ಸಲಹೆಗಾರರೊಬ್ಬರು ಭಾನುವಾರ ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ.

ಜನವರಿ 6ರ ಕ್ಯಾಪಿಟಲ್ ಹಿಲ್ಸ್ ಹಿಂಸಾಚಾರದ ಬಳಿಕ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಅಮಾನತು ಮಾಡಲಾಗಿತ್ತು.

ADVERTISEMENT

ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆ ಆರಂಭಿಸುತ್ತಿರುವ ಬಗ್ಗೆ 2020 ರಲ್ಲಿ ಅವರ ಚುನಾವಣಾ ಪ್ರಚಾರದ ಹೊಣೆ ಹೊತ್ತಿದ್ದ ವಕ್ತಾರ ಜೇಸನ್ ಮಿಲ್ಲರ್, ಫಾಕ್ಸ್ ನ್ಯೂಸ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಟ್ರಂಪ್ ತಮ್ಮದೇ ಆದ ಹೊಸ ವೇದಿಕೆಯೊಂದಿಗೆ ಸಾಮಾಜಿಕ ಮಾಧ್ಯಮಕ್ಕೆ ಪುನಃ ಪ್ರವೇಶಿಸಲಿದ್ದು, ಮತ್ತೆ ಆಟ ಶುರುವಾಗಲಿದೆ ಎಂದಿದ್ದಾರೆ.

ಆದರೆ, ಅಮೆರಿಕದ ಮಾಜಿ ಅಧ್ಯಕ್ಷರ ಸಾಮಾಜಿಕ ಮಾಧ್ಯಮ ಹೇಗಿರಲಿದೆ ಎಂಬ ಬಗ್ಗೆ ಮಿಲ್ಲರ್ ಹೆಚ್ಚಿನ ವಿವರಗಳನ್ನು ನೀಡಿಲ್ಲ, ಟ್ರಂಪ್ ಸಂಸ್ಥೆಗಳ ಅಧಿಕಾರಿಗಳಿಂದ ತಕ್ಷಣಕ್ಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದೇವೇಳೆ, ಸಾಮಾನ್ಯ ಜನರಿಗೆ ಅನ್ವಯವಾಗುವ ನಿಯಮಾವಳಿಗಳನ್ನೇ ವಿಶ್ವ ನಾಯಕರಿಗೂ ಅನ್ವಯಿಸಬೇಕೆ? ಎಂಬ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿರುವ ಟ್ವಿಟರ್, ವಿಶ್ವ ನಾಯಕರನ್ನು ಯಾವಾಗ ಮತ್ತು ಹೇಗೆ ನಿಷೇಧಿಸಬೇಕು ಎಂಬ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯುವುದಾಗಿ ಕಳೆದ ವಾರ ತಿಳಿಸಿದೆ.

ಕ್ಯಾಪಿಟಲ್ ಹಿಲ್ಸ್ ದಾಂಧಲೆ ಬಳಿಕ ಟ್ರಂಪ್ ಅವರ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅಮಾನತು ಮಾಡಿದ ಟ್ವಿಟರ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಇನ್ನು ಮುಂದೆ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಖಾತೆಗಳನ್ನು ಹೇಗೆ ನಿರ್ವಹಿಸಬೇಕು ಎಂಬ ವಿಧಾನದ ಬಗ್ಗೆ ಪರಿಶೀಲನೆಯಲ್ಲಿ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.