ADVERTISEMENT

ಕೋವಿಡ್ ತಪಾಸಣೆ ನಿಧಾನಗೊಳಿಸಲು ಟ್ರಂಪ್ ಸೂಚನೆ

ಏಜೆನ್ಸೀಸ್
Published 21 ಜೂನ್ 2020, 6:48 IST
Last Updated 21 ಜೂನ್ 2020, 6:48 IST
ಟುಲ್ಸದಲ್ಲಿ ಶನಿವಾರ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್
ಟುಲ್ಸದಲ್ಲಿ ಶನಿವಾರ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್   

ಟುಲ್ಸಾ, (ಅಮೆರಿಕ): 'ಕೋವಿಡ್–19 ತಪಾಸಣೆಯನ್ನು ನಿಧಾನಗೊಳಿಸುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದೇನೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ಹೆಚ್ಚು ತಪಾಸಣೆ ನಡೆಸಿದರೆ, ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ವ್ಯಾಪಿಸಲು ಶುರುವಾದ ಬಳಿಕ ಒಕ್ಲಹಾಮಾದ ಟುಲ್ಸಾದಲ್ಲಿ ಮೊದಲ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ತಪಾಸಣೆ ಎಂಬುದು ಎರಡು ಅಂಚಿನ ಅಲಗು’ ಎಂದು ವಿಶ್ಲೇಷಿಸಿದ್ದಾರೆ.

ADVERTISEMENT

ಜಗತ್ತಿನಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಈವರೆಗೆ 2.5 ಕೋಟಿ ತಪಾಸಣೆಗಳನ್ನು ನಡೆಸಲಾಗಿದೆ.

‘ಇದು ಒಂಥರಾ ಸಂದಿಗ್ಧದ ಸಮಯ. ದೊಡ್ಡ ಮಟ್ಟದ ತಪಾಸಣೆ ನಡೆಸಿದರೆ, ದೊಡ್ಡ ಸಂಖ್ಯೆ ಸೋಂಕಿತರು ಕಂಡುಬರುತ್ತಾರೆ. ಹೀಗಾಗಿ ತಪಾಸಣೆ ಪ್ರಮಾಣ ತಗ್ಗಿಸಲು ಸೂಚಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಅವರು ಈ ಮಾತುಗಳನ್ನು ಪ್ರೇಕ್ಷಕರನ್ನು ಹುರಿದುಂಬಿಸಲು ಹೇಳಿದರೋ ಅಥವಾ ನಿಜವಾಗಿಯೂ ನಿರ್ಣಯ ಕೈಗೊಂಡರೋ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.

ಟ್ರಂಪ್ ಮಾತಿನ ಬಗ್ಗೆ ಶ್ವೇತಭವನದ ಅಧಿಕಾರಿಯೊಬ್ಬರು ಹೇಳುವುದು ಹೀಗೆ. ‘ ‌ಟ್ರಂಪ್ ಅವರು ಮಾಧ್ಯಮಗಳ ಅಸಂಬದ್ಧ ಪ್ರಚಾರವನ್ನು ಹೀಗೆ ತಮಾಷೆಯಾಗಿ ಹೇಳಿದ್ದಾರೆ. ಕೋವಿಡ್ ತಪಾಸಣಾ ಸಂಖ್ಯೆಯ ವಿಚಾರದಲ್ಲಿ ಜಗತ್ತಿನಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. 2.5 ಕೋಟಿ ಪರೀಕ್ಷೆ ನಡೆಸಿದ್ದೇವೆ ಎಂದು ಜಗತ್ತಿಗೆ ಹೇಳಲು ಹೆಮ್ಮೆ ಎನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ತಪಾಸಣೆ ವೇಗ ತಗ್ಗಿಸುವ ಟ್ರಂಪ್ ಅವರ ನಿಲುವನ್ನು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜೋ ಬಿಡೆನ್ ಅವರು ‘ಭಯಾನಕ’ ಎಂದು ಕರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.