ADVERTISEMENT

ಹಾಂಗ್‌ಕಾಂಗ್‌ ಸ್ವಾಯತ್ತತಾ ಕಾಯ್ದೆಗೆ ಡೊನಾಲ್ಡ್‌ ಟ್ರಂಪ್‌ ಸಹಿ

ಪಿಟಿಐ
Published 15 ಜುಲೈ 2020, 8:40 IST
Last Updated 15 ಜುಲೈ 2020, 8:40 IST
ಡೊನಾಲ್ಡ್‌ ಟ್ರಂಪ್‌ (ಎಪಿ/ಪಿಟಿಐ ಚಿತ್ರ)
ಡೊನಾಲ್ಡ್‌ ಟ್ರಂಪ್‌ (ಎಪಿ/ಪಿಟಿಐ ಚಿತ್ರ)   

ವಾಷಿಂಗ್ಟನ್‌: ಹಾಂಗ್‌ಕಾಂಗ್‌ನ ಸ್ವಾಯತ್ತತೆ ಕಾಯ್ದೆಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಂಗಳವಾರ ಸಹಿ ಮಾಡಿದ್ದಾರೆ. ಜತೆಗೆ ಹಾಂಗ್‌ಕಾಂಗ್‌ ಅನ್ನು ವಿಶೇಷವಾಗಿ ಪರಿಗಣಿಸುವ ಕಾನೂನನ್ನು ಕೊನೆಗೊಳಿಸುವ ಕಾರ್ಯಕಾರಿ ಆದೇಶಕ್ಕೂ ಸಹಿ ಮಾಡಿದ್ದಾರೆ.

‘ಹಾಂಗ್‌ಕಾಂಗ್‌ ಜನರ ಮೇಲಿನ ದೌರ್ಜನ್ಯಕ್ಕೆ ಚೀನಾವನ್ನು ಹೊಣೆಗಾರನಾಗಿಸುವಂಥ ಒಂದು ಕಾನೂನು ಹಾಗೂ ಕಾರ್ಯಕಾರಿ ಆದೇಶಕ್ಕೆ ನಾನು ಸಹಿ ಮಾಡಿದ್ದೇನೆ. ಹಾಂಗ್‌ಕಾಂಗ್‌ ಸ್ವಾಯತ್ತತೆ ಕಾನೂನನ್ನು ಅಮೆರಿಕದ ಕಾಂಗ್ರೆಸ್‌ ಒಮ್ಮತದಿಂದ ಅಂಗೀಕರಿಸಿದೆ. ಹಾಂಗ್‌ಕಾಂಗ್‌ನ ಸ್ವಾತಂತ್ರ್ಯವನ್ನು ಕಸಿಯಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಶಕ್ತಿಶಾಲಿ ಅಸ್ತ್ರವನ್ನು ಈ ಕಾನೂನು ಅಮೆರಿಕಕ್ಕೆ ನೀಡುತ್ತದೆ ಎಂದು ಟ್ರಂಪ್‌ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ತಿಳಿಸಿದರು.

‘ಇನ್ನು ಮುಂದೆ ಹಾಂಗ್‌ಕಾಂಗ್‌ ಅನ್ನೂ ಚೀನಾದಂತೆಯೇ ಪರಿಗಣಿಸಲಾಗುವುದು. ವಿಶೇಷ ಸ್ಥಾನಮಾನ, ವಿಶೇಷ ಆರ್ಥಿಕ ಅನುಕೂಲ, ಸೂಕ್ಷ್ಮ ತಂತ್ರಜ್ಞಾನಗಳ ವರ್ಗಾವಣೆ... ಯಾವುದೂ ಇರುವುದಿಲ್ಲ. ಅಷ್ಟೇ ಅಲ್ಲ, ಚೀನಾಗೆ ನಾವು ಈಗಾಗಲೇ ಭಾರಿ ಸುಂಕ ವಿಧಿಸಿದ್ದು, ಇನ್ನು ಮುಂದೆ ಹಾಂಗ್‌ಕಾಂಗ್‌ ಮೇಲೂ ಅಂಥ ಸುಂಕ ವಿಧಿಸುತ್ತೇವೆ ಎಂದು ಟ್ರಂಪ್‌ ಹೇಳಿದರು.‌

ADVERTISEMENT

‘ಅಮೆರಿಕದ ಹಿಂದಿನ ಅಧ್ಯಕ್ಷರೆಲ್ಲರೂ ಚೀನಾದ ಕೈಗೊಂಬೆಯಾಗಿದ್ದರು ಎಂದು ಆರೋಪಿಸಿದ ಟ್ರಂಪ್‌, ನಮ್ಮ ಆಡಳಿತವು ಚೀನಾದ ಮೇಲೆ ಹೆಚ್ಚಿನ ಸುಂಕ ವಿಧಿಸಿತು, ನಾವು ಚೀನಾದ ತಂತ್ರಜ್ಞಾನ ಹಾಗೂ ಟೆಲಿಕಾಂ ಸೇವಾದಾತರನ್ನು ಎದುರಿಸಿದೆವು, ಬೌದ್ಧಿಕ ಆಸ್ತಿ ಕಳ್ಳತನವನ್ನು ಎದುರಿಸಿದೆವು. ಈ ವಿಚಾರದಲ್ಲಿ ಅನೇಕ ರಾಷ್ಟ್ರಗಳ ಮನವೊಲಿಸಿದೆವು. ಹೆಚ್ಚಿನ ಕೆಲಸವನ್ನು ನಾನು ಸ್ವತಃ ಮಾಡಿದ್ದೇನೆ. ಚೀನಾದ ವಿರುದ್ಧ ನನಗಿಂತ ಕಠಿಣವಾಗಿ ಯಾರೂ ನಡೆದುಕೊಂಡಿರಲಿಲ್ಲ’ ಎಂದರು.

ಅಧ್ಯಕ್ಷ ಸ್ಥಾನಕ್ಕೆ ತನಗೆ ಪ್ರತಿಸ್ಪರ್ಧಿಯಾಗಿದ್ದ ಜೋ ಬಿಡೆನ್‌ ಅವರು ವಿಶ್ವ ವ್ಯಾಪಾರ ಸಂಘಟನೆಯಲ್ಲಿ ಚೀನಾದ ಪ್ರವೇಶವನ್ನು ಬೆಂಬಲಿಸಿದ್ದರು. ಇದು ಜಗತ್ತಿನ ಇತಿಹಾಸದಲ್ಲಿ ಅತಿ ದೊಡ್ಡ ಆರ್ಥಿಕ ಮತ್ತು ಭೌಗೋಳಿಕ ವಿಪತ್ತು ಎಂದು ಟ್ರಂಪ್‌ ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.