ADVERTISEMENT

ಕಿಂಗ್‌ ಚಾರ್ಲ್ಸ್‌ –3, ಬ್ರಿಟನ್ ಪ್ರಧಾನಿ ಸ್ಟಾರ್ಮರ್‌ ಭೇಟಿಯಾದ ಟ್ರಂಪ್‌

ಬ್ರಿಟನ್‌ನಲ್ಲಿ 205 ಬಿಲಿಯನ್‌ ಡಾಲರ್ ಹೂಡಿಕೆ ಘೋಷಿಸಿದ ಅಮೆರಿಕ

ಏಜೆನ್ಸೀಸ್
Published 18 ಸೆಪ್ಟೆಂಬರ್ 2025, 14:47 IST
Last Updated 18 ಸೆಪ್ಟೆಂಬರ್ 2025, 14:47 IST
ಡೊನಾಲ್ಡ್‌ ಟ್ರಂಪ್‌ (ಬಲ) ಅವರು ಕಿಂಗ್‌ ಚಾರ್ಲ್ಸ್‌ –3 ಅವರೊಂದಿಗೆ ಮಾತುಕತೆ ನಡೆಸಿದರು –ಎಎಫ್‌ಪಿ ಚಿತ್ರ
ಡೊನಾಲ್ಡ್‌ ಟ್ರಂಪ್‌ (ಬಲ) ಅವರು ಕಿಂಗ್‌ ಚಾರ್ಲ್ಸ್‌ –3 ಅವರೊಂದಿಗೆ ಮಾತುಕತೆ ನಡೆಸಿದರು –ಎಎಫ್‌ಪಿ ಚಿತ್ರ   

ಲಂಡನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಗುರುವಾರ ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 

ಕಿಂಗ್‌ ಚಾರ್ಲ್ಸ್‌ –3  ಆಹ್ವಾನದ ಮೇರೆಗೆ ಟ್ರಂಪ್‌ ಬ್ರಿಟನ್‌ಗೆ ಭೇಟಿ ನೀಡಿದ್ದು, ಇದು ಬ್ರಿಟನ್‌ಗೆ ಅವರ ಎರಡನೆಯ ಭೇಟಿಯಾಗಿದೆ. 

‘ಉಕ್ರೇನ್‌ –ರಷ್ಯಾ ಯುದ್ಧ ಕೊನೆಗಾಣಿಸುವ ನಿಟ್ಟಿನಲ್ಲಿ ಟ್ರಂಪ್ ನಡೆಸಿರುವ ಪ್ರಯತ್ನವನ್ನು ಇತ್ತೀಚೆಗೆ ಸ್ಟಾರ್ಮರ್‌ ಶ್ಲಾಘಿಸಿದ್ದರು. ಈ ವಿಚಾರವೂ ಸೇರಿದಂತೆ, ಗಾಜಾಪಟ್ಟಿಯಲ್ಲಿನ ಸಮಸ್ಯೆ, ’ನ್ಯಾಟೊ‘ ಮೈತ್ರಿಕೂಟದ ಭವಿಷ್ಯದ ಬಗ್ಗೆ ಸ್ಟಾರ್ಮರ್‌ –ಟ್ರಂಪ್‌  ಚರ್ಚೆ ನಡೆಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಉಭಯ ಮುಖಂಡರು ಈ ವಿಚಾರವಾಗಿ ಅಧಿಕೃತ ಹೇಳಿಕೆ ನೀಡಿಲ್ಲ. 

ADVERTISEMENT

ಅಮೆರಿಕ – ಬ್ರಿಟನ್‌ ಕಂಪನಿಗಳನ್ನು ಒಳಗೊಂಡ ದೊಡ್ಡ ಮಟ್ಟದ ಉದ್ಯಮ ಪಾಲುದಾರಿಕೆ, ವಿದೇಶಾಂಗ ವ್ಯವಹಾರ, ಹೂಡಿಕೆ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ತಂತ್ರಜ್ಞಾನ, ಇಂಧನ, ಜೀವ ವಿಜ್ಞಾನ ಕ್ಷೇತ್ರ ಸೇರಿ ಬ್ರಿಟನ್‌ನಲ್ಲಿ ಮುಂದಿನ ಒಂದು ದಶಕದಲ್ಲಿ 205 ಬಿಲಿಯನ್‌ ಡಾಲರ್‌ (ಅಂದಾಜು ₹18 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಅಮೆರಿಕ ಘೋಷಿಸಿದೆ. 

ಗುರುವಾರ ಬೆಳಿಗ್ಗೆ ವಿಂಡ್ಸರ್‌ ಕ್ಯಾಸಲ್‌ನಿಂದ ಹೊರಟ ಟ್ರಂಪ್‌, ಬ್ರಿಟನ್‌ ಪ್ರಧಾನಿ ನಿವಾಸದಲ್ಲಿ ಕಿಂಗ್‌ ಚಾರ್ಲ್ಸ್‌ –3 ಅವರನ್ನು ಭೇಟಿಯಾದರು. ಬ್ರಿಟಿಷ್‌ ರಾಜಮನೆತನದ ವತಿಯಿಂದ ಟ್ರಂಪ್‌ಗೆ ಅದ್ಧೂರಿ ಸ್ವಾಗತ ಕೋರಲಾಯಿತು. ‘ಕಿಂಗ್‌ ಚಾರ್ಲ್ಸ್‌ –3‘ ಅವರು ‘ಒಬ್ಬ ಶ್ರೇಷ್ಠ ವ್ಯಕ್ತಿ, ಮಹಾನ್‌ ರಾಜ’ ಎಂದು ಬಣ್ಣಿಸಿದ ಟ್ರಂಪ್‌, ‘ಬ್ರಿಟನ್‌ನಲ್ಲಿ ಲಭಿಸಿರುವುದು ನನ್ನ ಜೀವನದ ಅತ್ಯುನ್ನತ ಗೌರವಗಳಲ್ಲಿ ಒಂದು ಎಂದು’ ಧನ್ಯವಾದ ಸಲ್ಲಿಸಿದರು. 

ಅಮೆರಿಕದ ಪ್ರಥಮ ಮಹಿಳೆ, ಟ್ರಂಪ್‌ ಅವರ ಪತ್ನಿ ಮೆಲಾನಿಯಾ ಟ್ರಂಪ್‌ ‘ವಿಂಡ್ಸರ್‌ ಕ್ಯಾಸಲ್‌‘ನಲ್ಲೇ ಉಳಿದುಕೊಂಡು ರಾಣಿ ಕಮಿಲಾ, ಕ್ಯಾಥರೀನ್‌ ಅವರೊಂದಿಗೆ ಸಮಯ ಕಳೆದರು. 

ಪ್ರಮುಖ ಒಪ್ಪಂದಗಳು

  * ಅಮೆರಿಕದ ಮೈಕ್ರೊಸಾಫ್ಟ್‌ ಓಪನ್‌ಎಐ ಬ್ಲ್ಯಾಕ್‌ಸ್ಟೋನ್‌ ಕಂಪನಿಗಳು ಬ್ರಿಟನ್‌ನಲ್ಲಿ ಎ.ಐ  ಕ್ವಾಂಟಂ ಕಂಪ್ಯೂಟಿಂಗ್‌ ಮತ್ತು ಅಣು ಇಂಧನ ಕ್ಷೇತ್ರದಲ್ಲಿ 42 ಬಿಲಿಯನ್‌ ಡಾಲರ್‌ (ಅಂದಾಜು ₹3.70 ಲಕ್ಷ ಕೋಟಿ) ಹೂಡಿಕೆ ಮಾಡಲಿವೆ

*ಬ್ರಿಟನ್‌ನ ಪ್ರಮುಖ ಔಷಧ ತಯಾರಿಕಾ ಕಂಪನಿ ‘ಜಿಎಸ್‌ಕೆ’ ಅಮೆರಿಕದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದೆ. ಆದರೆ ಹೂಡಿಕೆ ಮೊತ್ತವನ್ನು ಬಹಿರಂಗಪಡಿಸಿಲ್ಲ  

* ಬ್ರಿಟನ್‌ನಲ್ಲಿ ಅಣುಶಕ್ತಿ ಸ್ಥಾವರಗಳನ್ನು ನಿರ್ಮಿಸಲು ಇದಕ್ಕೆ ತ್ವರಿತ ಗತಿಯ ಅನುಮೋದನೆ ನೀಡಲು ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.