ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ಜಪಾನ್ ಜೊತೆಗೆ ವ್ಯಾಪಾರ ಚೌಕಟ್ಟು ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಲ್ಲಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಶೇಕಡಾ 15ರಷ್ಟು ಸುಂಕವನ್ನಷ್ಟೆ ವಿಧಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಶೇ 25ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.
‘ಈ ಒಪ್ಪಂದದಿಂದಾಗಿ ಅಮೆರಿಕದಲ್ಲಿ ನೂರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಜಪಾನ್ ದೇಶದೊಂದಿಗೆ ಮುಂದೆಯೂ ಅತ್ಯುತ್ತಮ ಸಂಬಂಧವನ್ನು ಮುಂದುವರಿಸಲಾಗುವುದು’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ‘ಟ್ರೂಥ್’ನಲ್ಲಿ ಬರೆದುಕೊಂಡಿದ್ದಾರೆ.
‘ನನ್ನ ನಿರ್ದೇಶನದಂತೆ, ಅಮೆರಿಕದಲ್ಲಿ 550 ಬಿಲಿಯನ್ ಡಾಲರ್ ಹೂಡಿಕೆ ಮಾಡಲು (₹47.51 ಲಕ್ಷ ಕೋಟಿ) ಜಪಾನ್ ಒಪ್ಪಿಗೆ ಸೂಚಿಸಿದೆ. ಅಲ್ಲದೇ, ಅಮೆರಿಕದ ಆಟೊಮೊಬೈಲ್ ಹಾಗೂ ಅಕ್ಕಿ ವಹಿವಾಟು ನಡೆಸಲು ತನ್ನ ಮಾರುಕಟ್ಟೆಯನ್ನು ತೆರೆದಿದೆ. ಹೀಗಾಗಿ, ಜಪಾನ್‌ನಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ಈ ಹಿಂದೆ ವಿಧಿಸಿದ್ದ ಶೇಕಡಾ 25ರ ಸುಂಕದ ಬದಲಾಗಿ ಶೇಕಡಾ 15ರಷ್ಟು ಸುಂಕ ವಿಧಿಸಲಾಗುವುದು’ ಎಂದು ಜಪಾನ್‌ನ ಪ್ರಧಾನಿ ಶಿಗೆರು ಇಶಿಬಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪರಿಷ್ಕೃತ ಸುಂಕವು ಆಗಸ್ಟ್ 1ರಿಂದ ಜಾರಿಗೆ ಬರಲಿದೆ.
ಫಿಲಿಪ್ಪೀನ್ಸ್‌ಗೆ ಶೇ 19 ಸುಂಕ: ಇಲ್ಲಿನ ಶ್ವೇತಭವನದಲ್ಲಿ ಅಧ್ಯಕ್ಷ ಫೆರ್ಡಿನೆಂಡ್ ಮಾರ್ಕಸ್ ಜೂನಿಯರ್ ಅವರ ಜೊತೆಗೆ ನಡೆದ ಸಭೆಯಲ್ಲಿ ವ್ಯಾಪಾರ ಒಪ್ಪಂದಕ್ಕೆ ಬರಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
‘ಆ ದೇಶಕ್ಕೆ ವಿಧಿಸಿರುವ ಸುಂಕ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಮೆರಿಕದಿಂದ ರಫ್ತು ಮಾಡುವ ಆಯ್ದ ಕೆಲವು ವಸ್ತುಗಳಿಗೆ ಫಿಲಿಪ್ಪೀನ್ಸ್ ಶೂನ್ಯ ಸುಂಕ ವಿಧಿಸಲು ನಿರ್ಧರಿಸಿದೆ. ಅದಕ್ಕೆ ಪ್ರತಿಯಾಗಿ ಅಲ್ಲಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಶೇಕಡಾ 19 ರಷ್ಟು ಸುಂಕ ವಿಧಿಸಲಾಗುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.