ADVERTISEMENT

‘ಹಾಕೆನ್‌ಕ್ರೇಜ್’ ಜೊತೆ ‘ಸ್ವಸ್ತಿಕ’ ಹೋಲಿಕೆ ಸಲ್ಲ: ‘ಹಿಂದೂಪ್ಯಾಕ್ಟ್‌’ ಮನವಿ

ಕೆನಡಾ ಪ್ರಧಾನಿ ಟ್ರುಡೊ, ಮುಖಂಡ ಜಗ್‌ಮೀತ್‌ ಸಿಂಗ್‌ಗೆ ಮನವಿ

ಪಿಟಿಐ
Published 16 ಫೆಬ್ರುವರಿ 2022, 12:31 IST
Last Updated 16 ಫೆಬ್ರುವರಿ 2022, 12:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಜರ್ಮನಿಯ ನಾಜಿಗಳ ಸಂಕೇತವಾಗಿದ್ದ ಹಾಕೆನ್‌ಕ್ರೇಜ್ ಹಾಗೂ ಹಿಂದೂಗಳ ಶ್ರದ್ಧೆಯ ಸಂಕೇತವಾದ ಸ್ವಸ್ತಿಕ ಎರಡೂ ಒಂದೇ ಎಂಬುದಾಗಿ ಭಾವಿಸಬಾರದು. ಹೋಲಿಕೆಯೂ ಸಲ್ಲ ಎಂದು ಅಮೆರಿಕ ಮೂಲದ ಹಿಂದೂ ಸಂಘಟನೆಯು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಹಾಗೂ ಭಾರತ ಮೂಲದ ಮುಖಂಡ ಜಗ್‌ಮೀತ್ ಸಿಂಗ್‌ ಅವರಿಗೆ ಮನವಿ ಮಾಡಿದೆ.

ಕೋವಿಡ್‌–19 ಪಿಡುಗಿನ ಕಾರಣ ಜಾರಿಗೊಳಿಸಿರುವ ಕಠಿಣ ನಿರ್ಬಂಧಗಳನ್ನು ವಿರೋಧಿಸಿ ನೂರಾರು ಟ್ರಕ್‌ಗಳೊಂದಿಗೆ ಜನರು ಕೆನಡಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯನ್ನು ಖಂಡಿಸಿ ಪ್ರಮುಖ ಪಕ್ಷ ಎನ್‌ಡಿಪಿ ಮುಖಂಡ ಸಿಂಗ್‌ ಅವರು ‘ಸ್ವಸ್ತಿಕಗಳು ಹಾಗೂ ಅದರ ಬೆಂಬಲಿಗರ ಬಾವುಟಗಳಿಗೆ ಕೆನಡಾದಲ್ಲಿ ಅವಕಾಶ ಇಲ್ಲ’ ಎಂಬುದಾಗಿ ಟ್ವೀಟ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕದ ಹಿಂದೂ ಸಂಘಟನೆಯಾದ ‘ಹಿಂದೂಪ್ಯಾಕ್ಟ್‌’ ಈ ಮನವಿ ಮಾಡಿದೆ.

‘ಸ್ವಸ್ತಿಕ ಸಂಕೇತವನ್ನು ಪ್ರಾಚೀನ ಕಾಲದಿಂದಲೂ ಹಿಂದೂಗಳು, ಬೌದ್ಧರು, ಸಿಖ್ಖರು ಸೇರಿದಂತೆ ದೇಶೀಯ ಸಮುದಾಯಗಳು ಬಳಸುತ್ತಿವೆ. ಹಾಕೆನ್‌ಕ್ರೇಜ್‌ ಎಂಬುದು 20ನೇ ಶತಮಾನದಲ್ಲಿ ನಾಜಿಗಳು ಬಳಸುತ್ತಿದ್ದ ಸಂಕೇತ’ ಎಂದು ‘ಹಿಂದೂಪ್ಯಾಕ್ಟ್‌’ನ ಕಾರ್ಯಕಾರಿ ನಿರ್ದೇಶಕ ಉತ್ಸವ್ ಚಕ್ರವರ್ತಿ ಹೇಳಿದ್ದಾರೆ.

ADVERTISEMENT

‘ಈ ರೀತಿ ತಪ್ಪಾಗಿ ಅರ್ಥೈಸುವುದರಿಂದ ಹಿಂದೂಗಳು ಹಾಗೂ ಸಿಖ್ಖರ ವಿರುದ್ಧ ದೌರ್ಜನ್ಯ ಹೆಚ್ಚಾಗುತ್ತವೆ. ಕಳೆದ ತಿಂಗಳು ಕೆನಡಾದಲ್ಲಿ ಆರು ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿ, ಲೂಟಿ ಮಾಡಲಾಗಿದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.