ADVERTISEMENT

25 ಟನ್‌ ಇ–ತ್ಯಾಜ್ಯ ಪುನರ್‌ಬಳಕೆಗೆ

ದುಬೈನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿಯ ಅಭಿಯಾನ

ಪಿಟಿಐ
Published 15 ಜನವರಿ 2021, 12:07 IST
Last Updated 15 ಜನವರಿ 2021, 12:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಇಲ್ಲಿ ನೆಲೆಸಿರುವ 15 ವರ್ಷದ ಭಾರತ ಮೂಲದ ಬಾಲಕಿ ಅಭಿಯಾನವೊಂದನ್ನು ಆರಂಭಿಸುವುದರ ಮೂಲಕ 25 ಟನ್‌ ಇ–ತ್ಯಾಜ್ಯವನ್ನು ಪುನರ್‌ಬಳಕೆ ಮಾಡಲು ಸಹಾಯ ಮಾಡಿದ್ದಾಳೆ ಎಂದು ಗಲ್ಫ್‌ ನ್ಯೂಸ್‌ ವರದಿ ಮಾಡಿದೆ.

ಪ್ರಸ್ತುತ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ರಿವಾ ತುಲ್ಪುಲೆಗೆ 2016ರಲ್ಲಿ ಮನೆ ಸ್ಥಳಾಂತರದ ಸಂದರ್ಭದಲ್ಲಿ ಈ ಅಭಿಯಾನ ಆರಂಭಿಸುವ ಆಲೋಚನೆ ಬಂದಿತ್ತು. ಮನೆಯಲ್ಲಿರುವ ಕಪಾಟುಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಅದರಲ್ಲಿ ಹಾಳಾದ ಹಲವು ಎಲೆಕ್ಟ್ರಾನಿಕ್‌ ಉಪಕರಣಗಳು ದೊರೆತಿದ್ದವು. ನಂತರದಲ್ಲಿ ‘ವಿಕೇರ್‌ಡಿಎಕ್ಸ್‌ಬಿ’ ಎಂಬ ಅಭಿಯಾನ ಆರಂಭಿಸಿದ ರಿವಾ, ಕಳೆದ ನಾಲ್ಕು ವರ್ಷದಲ್ಲಿ 25 ಟನ್‌ಗೂ ಅಧಿಕ ಇ–ತ್ಯಾಜ್ಯವನ್ನು ಸಂಗ್ರಹಿಸಿ ಪುನರ್‌ಬಳಕೆಗೆ ನೀಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಈ ಉಪಕರಣಗಳು ಬೇಡವೆಂದರೆ ಬಿಸಾಕಬಹುದಲ್ಲವೇ ಎಂದು ಅಮ್ಮನನ್ನು ಪ್ರಶ್ನಿಸಿದ್ದೆ. ಈ ಸಂದರ್ಭದಲ್ಲಿ ಇವುಗಳನ್ನು ಕಸದ ರೀತಿಯಲ್ಲಿ ಬಿಸಾಡಲು ಸಾಧ್ಯವಿಲ್ಲ. ಪ್ರತ್ಯೇಕವಾಗಿ ಇವುಗಳನ್ನು ವಿಲೇವಾರಿ ಮಾಡಬೇಕು ಎಂದು ಅಮ್ಮ ತಿಳಿಸಿದ್ದರು. ಇದು ನನ್ನ ಕುತೂಹಲಕ್ಕೆ ಕಾರಣವಾಗಿತ್ತು. ಈ ಕುರಿತು ಸಂಶೋಧನೆ ನಡೆಸಿ, ಅಭಿಯಾನ ಪ್ರಾರಂಭಿಸುವ ನಿರ್ಧಾರಕ್ಕೆ ಬಂದಿದ್ದೆ’ ಎಂದು ರಿವಾ ಹೇಳಿದ್ದಾರೆ.

ADVERTISEMENT

ಜಿಇಎಂಎಸ್‌ ಮಾಡರ್ನ್‌ ಅಕಾಡೆಮಿ ವಿದ್ಯಾರ್ಥಿನಿಯಾಗಿರುವ ರಿವಾ, ಸಂಗ್ರಹವಾದ ಇ–ತ್ಯಾಜ್ಯವನ್ನು ದುಬೈ ಮೂಲದ ಎನ್ವಿರೊಸರ್ವ್‌ ಕಂಪನಿಗೆ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮುಖಾಂತರ ರಿವಾ ಈ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.