
ನ್ಯೂಯಾರ್ಕ್: ಅಮೆರಿಕದಲ್ಲಿರುವ ಕಾನ್ಸುಲರ್ ಜನರಲ್‌ಗಳ ಸಮಾವೇಶ ನ್ಯೂಯಾರ್ಕ್‌ನಲ್ಲಿ ನಡೆಯಿತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಕುರಿತು ಪರಿಶೀಲನೆ ನಡೆಸಿದರು.
ಅಮೆರಿಕದಲ್ಲಿ ನೆಲಸಿರುವ ಭಾರತೀಯ ಸಮುದಾಯಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದರು.
‘ಭಾರತ ಮತ್ತು ಅಮೆರಿಕದ ಪಾಲುದಾರಿಕೆಯನ್ನು ಬಲಪಡಿಸಲು ನಮ್ಮ ರಾಯಭಾರಿ ಕಚೇರಿ ಹಾಗೂ ರಾಯಭಾರಿಗಳ ಬದ್ಧತೆ ಮತ್ತು ಪ್ರಯತ್ನಗಳನ್ನು ಶ್ಲಾಘಿಸುತ್ತೇನೆ’ ಎಂದು ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಗುಟೆರಸ್ ಭೇಟಿ: ಇದಕ್ಕೂ ಮುನ್ನಾ ದಿನ, ಜೈಶಂಕರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರನ್ನು ಭೇಟಿಯಾಗಿದ್ದರು.
‘ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸ್ಪಷ್ಟ, ಸ್ಥಿರವಾದ ಬೆಂಬಲ ನೀಡಿದ್ದಕ್ಕಾಗಿ ಗುಟೆರೆಸ್ ಅವರಿಗೆ ಧನ್ಯವಾದ ಅರ್ಪಿಸುವೆ. ಭಾರತಕ್ಕೆ ವಿಶ್ವಸಂಸ್ಥೆಯ ಮುಖ್ಯಸ್ಥರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ’ ಎಂದು ಜೈಶಂಕರ್ ತಿಳಿಸಿದ್ದಾರೆ.
ಸಮಾವೇಶದಲ್ಲಿ ಅಮೆರಿಕದಲ್ಲಿ ಭಾರತದ ರಾಯಭಾರಿ ವಿನಯ್ ಕ್ವಾತ್ರ, ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ನಾಮ್‌ಗ್ಯಾ ಖಂಪಾ ಹಾಗೂ ಅಟ್ಲಾಂಟಾ, ಬಾಸ್ಟನ್, ಷಿಕಾಗೊ, ಹ್ಯೂಸ್ಟನ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಸಿಯಾಟಲ್‌ನಲ್ಲಿರುವ ಭಾರತೀಯ ಕಾನ್ಸುಲೇಟ್‌ಗಳ ಕಾನ್ಸುಲರ್‌ಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.