ADVERTISEMENT

ಪಾಕಿಸ್ತಾನ: ಬಲೂಚಿಸ್ತಾನದಲ್ಲಿ ಪ್ರಬಲ ಭೂಕಂಪ, 22 ಸಾವು, 300 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2021, 11:45 IST
Last Updated 7 ಅಕ್ಟೋಬರ್ 2021, 11:45 IST
ಪಾಕಿಸ್ತಾನದ ಬಲೂಚಿಸ್ತಾನದ ಹರ್ನೈನಲ್ಲಿ ಭೂಕಂಪದ ನಂತರ ಮೃತಪಟ್ಟ ಮಗುವಿನ ಮೃತ ದೇಹವನ್ನು ವ್ಯಕ್ತಿಯೊಬ್ಬರು ಹೊತ್ತೊಯ್ದರು. ರಾಯಿಟರ್ಸ್‌. 
ಪಾಕಿಸ್ತಾನದ ಬಲೂಚಿಸ್ತಾನದ ಹರ್ನೈನಲ್ಲಿ ಭೂಕಂಪದ ನಂತರ ಮೃತಪಟ್ಟ ಮಗುವಿನ ಮೃತ ದೇಹವನ್ನು ವ್ಯಕ್ತಿಯೊಬ್ಬರು ಹೊತ್ತೊಯ್ದರು. ರಾಯಿಟರ್ಸ್‌.    

ಕರಾಚಿ, ಪಾಕಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ 5.9 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಹಲವು ಮನೆಗಳು ಕುಸಿದಿದ್ದು ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ ಆರು ಮಂದಿ ಮಕ್ಕಳು. ದುರಂತದಲ್ಲಿ 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮರಣ ಪ್ರಮಾಣ ಹೆಚ್ಚಾಗಬಹುದು ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಜಿಯೊ ನ್ಯೂಸ್‌ ವರದಿ ಮಾಡಿದೆ.

ಭೂಕಂಪದ ಕೇಂದ್ರ ಬಿಂದು ಹರ್ನೈ ಬಳಿ ಸುಮಾರು 15 ಕಿ.ಮೀ. ಆಳದಲ್ಲಿತ್ತು ಎಂದು ಇಸ್ಲಾಮಾಬಾದ್‌ನ ರಾಷ್ಟ್ರೀಯ ಭೂಕಂಪನ ಮೇಲ್ವಿಚಾರಣಾ ಕೇಂದ್ರವು ವರದಿ ಮಾಡಿದೆ.

ADVERTISEMENT

ಘಟನೆಯಲ್ಲಿ ನಿಖರವಾದ ಹಾನಿ ಬಗ್ಗೆ ಇನ್ನೂ ಮಾಹಿತಿ ದೊರೆತಿಲ್ಲ ಎಂದೂ ಅದು ಹೇಳಿದೆ.

ಕ್ವೆಟ್ಟಾ, ಸಿಬಿ, ಹರ್ನೈ, ಪಿಶಿನ್‌, ಕಿಲಾ ಸೈಫುಲ್ಲಾ, ಚಮನ್‌, ಜಿಯಾರತ್‌ ಮತ್ತು ಬಲೂಚಿಸ್ತಾನ ಪ್ರದೇಶಗಳಲ್ಲಿ ಭೂಕಂಪದ ಪ್ರಭಾವ ಇತ್ತು. ಹೆಚ್ಚಿನ ಸಾವು–ನೋವುಗಳು ದೂರದ ಈಶಾನ್ಯ ಜಿಲ್ಲೆ ಹರ್ನೈಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.

ಕಡಿಮೆ ಆಳದ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ ಅಪ್ಪಳಿಸಿದೆ. ಇಂತಹ ಭೂಕಂಪಗಳು ಹೆಚ್ಚು ಹಾನಿ ಉಂಟುಮಾಡಬಹುದು ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.

ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಿದ್ದಾರೆ ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಪಿಡಿಎಂಎ) ಹೇಳಿದೆ.

ಭೂಮಿಯ ಕಂಪನದ ನಂತರ ಕ್ವೆಟ್ಟಾ ನಗರ ನಿವಾಸಿಗಳು ಬೀದಿಗೆ ಓಡಿ ಬರುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಚಿತ್ರಗಳು ತೋರಿಸಿವೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ನಸುಕಿನ ಜಾವ 3.20 ರ ಹೊತ್ತಿಗೆ ಭೂಮಿ ನಡುಗಿದೆ. ಇದರಿಂದ ಭಯಭೀತರಾದ ನಾಗರಿಕರು ಪವಿತ್ರ ಕುರಾನ್‌ ಪದ್ಯಗಳನ್ನು ಪಠಿಸುತ್ತಾ ಮನೆಗಳಿಂದ ಹೊರಬಂದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

‘ಸ್ಥಳದಲ್ಲಿ ತುರ್ತು ಸೇವೆಗಾಗಿ ಆಂಬುಲೆನ್ಸ್‌, ಹೆಲಿಕಾ‍ಪ್ಟರ್‌ ಮೊದಲಾದವುಗಳನ್ನು ಇರಿಸಲಾಗಿದೆ. ಈ ಸಂಬಂಧ ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಬಲೂಚಿಸ್ತಾನ ಮುಖ್ಯಮಂತ್ರಿ ಜಮ್‌ ಕಮಲ್‌ ಖಾನ್‌ ಅಲ್ಯಾನಿ ಟ್ವೀಟ್‌ ಮಾಡಿದ್ದಾರೆ.

ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಸೈನಿಕರು ಹರ್ನೈನ ಭೂಕಂಪ ಪೀಡಿತ ಪ್ರದೇಶಗಳಿಗೆ ತಲುಪಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.