ADVERTISEMENT

ಟರ್ಕಿಯಲ್ಲಿ ‌ಪ್ರಬಲ ಭೂಕಂಪ: 20 ಸಾವು, 600 ಮಂದಿಗೆ ಗಾಯ

ಏಜೆನ್ಸೀಸ್
Published 25 ಜನವರಿ 2020, 5:39 IST
Last Updated 25 ಜನವರಿ 2020, 5:39 IST
ಟರ್ಕಿಯಲ್ಲಿ ಭೂಕಂಪನಕ್ಕೆ ಕುಸಿದ ಕಟ್ಟಡ
ಟರ್ಕಿಯಲ್ಲಿ ಭೂಕಂಪನಕ್ಕೆ ಕುಸಿದ ಕಟ್ಟಡ   
""

ಇಸ್ತಾಂಬುಲ್‌: ಪೂರ್ವ ಟರ್ಕಿಯ ಎಲಾಜಿಂಗ್‌ ಪ್ರಾಂತ್ಯದಲ್ಲಿ ಶನಿವಾರ ಬೆಳಗ್ಗಿನ ಜಾವ ಭಾರೀ ಭೂಕಂಪ ಸಂಭವಿಸಿದ್ದು, 20 ಮಂದಿ ಸಾವಿಗೀಡಾಗಿದ್ದಾರೆ. 600 ಮಂದಿ ಗಾಯಗೊಂಡಿದ್ದಾರೆ.

ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 6.7ರಷ್ಟು ದಾಖಲಾಗಿದೆ. ಪೂರ್ವ ಪ್ರಾಂತ್ಯದ ಸಿವ್ರೈಸ್‌ನಲ್ಲಿ 10 ಕಿ.ಮೀ ಆಳದಲ್ಲಿ ಭೂಕಂಪ ಕೇಂದ್ರ ಬಿಂದುವಿತ್ತು ಎಂದು ವಿಪತ್ತು ಮತ್ತು ತುರ್ತು ಪರಿಸ್ಥಿತಿ ನಿರ್ವಹಣಾ ಇಲಾಖೆ ತಿಳಿಸಿದೆ.

ಕಂಪನದ ತೀವ್ರತೆಗೆ ಹತ್ತಕ್ಕು ಹೆಚ್ಚು ಕಟ್ಟಡಗಳು ನೆಲಸಮವಾಗಿವೆ. ಕಟ್ಟಡ ಅವಶೇಷಗಳಡಿ ಸಿಲುಕಿರುವವರ ರಕ್ಷಣೆ ಕಾರ್ಯಾಚರಣೆ ಭರದಿಂದ ಸಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದ್ದು, ಎಲಾಜಿಂಗ್ ನಗರದ 30 ಮಂದಿ ನಾಪತ್ತೆಯಾಗಿದ್ದಾರೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಮೃತರಲ್ಲಿ 13 ಮಂದಿ ಎಲಾಜಿಂಗ್‌ ಪ್ರಾಂತ್ಯದವರು, ನಾಲ್ವರು ಮಾಲಟ್ಯ, ಇಬ್ಬರು ದಿಯರ್‌ಬಕೀನ್‌ನವರಾಗಿದ್ದಾರೆ. ರಾತ್ರಿ ವೇಳೆ ಇಲ್ಲಿನ ತಾಪಮಾನ ಶೂನ್ಯಕ್ಕೆ ತಲುಪುವುದರಿಂದ ತಾತ್ಕಲಿಕ ಟೆಂಟ್‌, ಹಾಸಿಗೆ, ರಗ್ಗುಗಳನ್ನು ಒದಗಿಸಲಾಗಿದೆ. ಮನೆಗಳಿಂದ ಹೊರಕ್ಕೆ ಓಡಿಬಂದ ಜನ, ಮೈಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಬೀದಿಗಳಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ 1999ರಲ್ಲಿ ಪಶ್ಚಿಮ ಟರ್ಕಿಯಲ್ಲಿ 7.6 ತೀವ್ರತೆಯ ಭೂಕಂಪಸಂಭವಿಸಿದ್ದು, 17 ಸಾವಿರಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರು. 5 ಲಕ್ಷ ಮಂದಿ ನಿರಾಶ್ರಿತರಾಗಿದ್ದರು.ಇನ್ನು 2011ರಲ್ಲಿಯೂ ಪೂರ್ವ ಟರ್ಕಿಯ ವ್ಯಾನ್‌ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.

‘ಭೂಕಂಪದಲ್ಲಿ ಜೀವಕಳೆದುಕೊಂಡವರಿಗೆ ದೇವರು ಕರುಣೆ ಸಿಗಲಿ ಮತ್ತು ಘಟನೆಯಲ್ಲಿ ಗಾಯಗೊಂಡರು ಶೀಘ್ರ ಚೇತರಿಸಿಕೊಳ್ಳಲಿ’ ಟರ್ಕಿ ಅಧ್ಯಕ್ಷರೆಸಿಪ್‌ ತಯ್ಯಿಪ್‌ ಎರ್ಡೊಗನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.