ADVERTISEMENT

ಇಂಡೋನೇಷ್ಯಾ ಭೂಕಂಪ 162 ಸಾವು

5.6 ತೀವ್ರತೆ, ಹಲವು ಕಟ್ಟಡಗಳಿಗೆ ಹಾನಿ, 700ಕ್ಕೂ ಅಧಿಕ ಮಂದಿಗೆ ಗಾಯ 

ಏಜೆನ್ಸೀಸ್
Published 21 ನವೆಂಬರ್ 2022, 17:13 IST
Last Updated 21 ನವೆಂಬರ್ 2022, 17:13 IST
ಭೂಕಂಪದ ಸಂದರ್ಭದಲ್ಲಿ ಗಾಯಗೊಂಡವರಿಗೆ ಇಂಡೋನೇಷ್ಯಾದ ಸಿಯಾಂಜೂರ್ ಆಸ್ಪತ್ರೆ ಪಾರ್ಕಿಂಗ್ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಪಿಟಿಐ, ಎಪಿ ಚಿತ್ರ
ಭೂಕಂಪದ ಸಂದರ್ಭದಲ್ಲಿ ಗಾಯಗೊಂಡವರಿಗೆ ಇಂಡೋನೇಷ್ಯಾದ ಸಿಯಾಂಜೂರ್ ಆಸ್ಪತ್ರೆ ಪಾರ್ಕಿಂಗ್ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಪಿಟಿಐ, ಎಪಿ ಚಿತ್ರ   

ಜಕಾರ್ತ(ಎಪಿ): ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 162 ಮಂದಿ ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 5.6ರಷ್ಟುದಾಖಲಾಗಿದೆ. ಮೃತರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ.

ಹಲವು ಮನೆಗಳು ಮತ್ತು ಕಟ್ಟಡಗಳು ಕುಸಿದು ಬಿದ್ದಿವೆ.ಕೆಲವರು ತಮ್ಮ ಮಕ್ಕಳೊಂದಿಗೆ ಅಳುತ್ತಾ ಮನೆಗಳಿಂದ ಓಡಿ ಬಂದರು. ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದವರ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಜೆದಿಲ್‌ ಹಳ್ಳಿಯೊಂದರಲ್ಲೇ ಸುಮಾರು 25ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.

ರಕ್ಷಣಾ ತಂಡಗಳು, ಕುಸಿದ ಮನೆಗಳ ಅವಶೇಷಗಳಲ್ಲಿ ಹೂತು ಹೋಗಿರುವವರ ಹುಡುಕಾಟ ನಡೆಸಿದ್ದಾರೆ.ರಕ್ಷಣಾ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಮಕ್ಕಳು ಸೇರಿ ಗಾಯಾಳುಗಳಿಗೆ ಆಸ್ಪತ್ರೆಗಳ ಒಳಗೆ, ಹೊರಗೆ, ಟೆರೆಸ್‌, ಪಾರ್ಕಿಂಗ್ ಸ್ಥಳಗಳಲ್ಲಿ ಚಿಕಿತ್ಸೆ ನೀಡಲಾಯಿತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ರಾಜಧಾನಿ ಜಕಾರ್ತದಿಂದ 75 ಕಿ.ಮೀ ದೂರದಪಶ್ಚಿಮ ಜಾವಾ ಪ್ರಾಂತ್ಯದಸಿಯಾಂಜುರ್‌ ಪ್ರದೇಶದ 10 ಕಿಲೋ ಮೀಟರ್‌ (6.2 ಮೈಲಿ) ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಯಾಂಜೂರ್ ಸುತ್ತಮುತ್ತ ಭೂಕುಸಿತದ ವರದಿಯಾಗಿದೆ. ಇಸ್ಲಾಮಿಕ್ ವಸತಿ ಶಾಲೆ, ಆಸ್ಪತ್ರೆ ಮತ್ತು ಇತರ ಸಾರ್ವಜನಿಕ ಕಟ್ಟಡಗಳಿಗೂ ಹಾನಿಯಾಗಿದೆ.

‘ಮೂರು ಬಾರಿ ಭೂಮಿ ಪ್ರಬಲವಾಗಿ ಕಂಪಿಸಿತು. ಮೊದಲ ಕಂಪನದ ಅವಧಿ 10 ಸೆಕೆಂಡುಗಳು ಇತ್ತು’ ಎಂದು ಪ್ರತ್ಯಕ್ಷದರ್ಶಿ, ಅಂಗಡಿಯೊಂದರ ಮಾಲೀಕರಾದ ದೇವಿ ರಿಸ್ಮಾ ತಿಳಿಸಿದ್ದಾರೆ.

‘ಅತ್ಯಂತ ಹೆಚ್ಚು ಜನನಿಬೀಡ ಪ್ರದೇಶದಲ್ಲಿ ಕಟ್ಟಡಗಳು ಕುಸಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಸಾವು-ನೋವು ಮತ್ತು ಹಾನಿಯ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಮುಖ್ಯಸ್ಥ ಸುಹಾರ್ಯಾಂಟೊ ಹೇಳಿದ್ದಾರೆ.

‘ದೊಡ್ಡ ಕಂಪನದ ಅನುಭವವಾಯಿತು. ಸಹೋದ್ಯೋಗಿಗಳು ಮತ್ತು ನಾನು ಒಂಬತ್ತನೇ ಮಹಡಿಯಲ್ಲಿರುವ ನಮ್ಮ ಕಚೇರಿಯಿಂದತುರ್ತು ಮೆಟ್ಟಿಲು ಬಳಸಿಕೊಂಡು ಹೊರಬಂದೆವು’ ಎಂದು ದಕ್ಷಿಣ ಜಕಾರ್ತಾದ ಉದ್ಯೋಗಿ ವಿದಿ ಪ್ರಿಮಧಾನಿಯಾ ಹೇಳಿದರು.

‘ನನ್ನ ಸ್ನೇಹಿತರು ಕಟ್ಟಡದಿಂದ ಹೊರಗೆ ಓಡಿ ಹೋಗುತ್ತಿರುವುದನ್ನು ನೋಡಿದೆ. ಆದರೆ, ನಾನು ಹೊರಗೆ ಬರಲು ತುಂಬಾ ತಡವಾಯಿತು ಮತ್ತು ಗೋಡೆಗೆ ಡಿಕ್ಕಿ ಹೊಡೆದುಮೂರ್ಛೆ ಹೋದೆ’ ಎಂದು ಸಿಯಾಂಜೂರ್ ಪ್ರಾದೇಶಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಟ್ಟಡ ನಿರ್ಮಾಣ ಕಾರ್ಮಿಕ ಹಸನ್ ಹೇಳಿದರು. 270 ದಶಲಕ್ಷಕ್ಕೂ ಹೆಚ್ಚು ಜನರಿರುವ ಈ ದೇಶ ಆಗಾಗ್ಗೆ ಭೂಕಂಪ, ಜ್ವಾಲಾಮುಖಿ ಸ್ಫೋಟ ಮತ್ತು ಸುನಾಮಿಗಳಿಗೆ ತುತ್ತಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.