ADVERTISEMENT

ಎಪ್‌ಸ್ಟೈನ್‌ ಪ್ರಕರಣ: ಇನ್ನಷ್ಟು ದಾಖಲೆ ಬಿಡುಗಡೆ

ಪಿಟಿಐ
Published 31 ಜನವರಿ 2026, 14:42 IST
Last Updated 31 ಜನವರಿ 2026, 14:42 IST
ಜೆಫ್ರಿ ಎಫ್‌ಸ್ಟೈನ್‌
ಜೆಫ್ರಿ ಎಫ್‌ಸ್ಟೈನ್‌   

ನ್ಯೂಯಾರ್ಕ್: ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ಉದ್ಯಮಿ ಜೆಫ್ರಿ ಎಸ್‌ಸ್ಟೈನ್‌ನ ದುಷ್ಕೃತ್ಯಗಳ ತನಿಖೆಗೆ ಸಂಬಂಧಿಸಿದ ಇನ್ನಷ್ಟು ದಾಖಲೆಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದೆ.

ನ್ಯಾಯಾಂಗ ಇಲಾಖೆಯು 30 ಲಕ್ಷ ಪುಟಗಳಿಗೂ ಹೆಚ್ಚು ದಾಖಲೆಗಳು, 2 ಸಾವಿರಕ್ಕೂ ಹೆಚ್ಚು ವಿಡಿಯೊಗಳು ಮತ್ತು 1.80 ಲಕ್ಷ ಫೋಟೊಗಳನ್ನು ಬಿಡುಗಡೆ ಮಾಡಿದೆ ಎಂದು ಡೆಪ್ಯುಟಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚ್ ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ಕಡತಗಳಿಂದ ನ್ಯಾಯಾಂಗ ಇಲಾಖೆ ಏಕಕಾಲಕ್ಕೆ ಇಷ್ಟೊಂದು ದಾಖಲೆಗಳನ್ನು ಬಿಡುಗಡೆ ಮಾಡಿರುವುದು ಇದೇ ಮೊದಲು. ಈ ದಾಖಲೆಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಶುಕ್ರವಾರ ಅಪ್‌ಲೋಡ್‌ ಮಾಡಲಾಗಿದೆ. 

ADVERTISEMENT

ಬ್ರಿಟನ್‌ನ ಪ್ರಿನ್ಸ್‌ ಆ್ಯಂಡ್ರ್ಯೂ ಸೇರಿದಂತೆ ಎಪ್‌ಸ್ಟೈನ್‌ನ ಆಪ್ತರಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಎಪ್‌ಸ್ಟೈನ್‌ ಹಾಗೂ ಉದ್ಯಮಿ ಇಲಾನ್‌ ಮಸ್ಕ್‌ ನಡುವಿನ ಇ–ಮೇಲ್‌ ಪತ್ರ ವ್ಯವಹಾರದ ಮಾಹಿತಿಯೂ ಈ ದಾಖಲೆಗಳಲ್ಲಿ ಸೇರಿವೆ.

ಲೈಂಗಿಕ ವೃತ್ತಿಗೆ ಬಾಲಕಿಯರನ್ನು ಅಕ್ರಮವಾಗಿ ಸಾಗಿಸಿದ ಆರೋಪಕ್ಕಾಗಿ ಬಂಧನಕ್ಕೆ ಒಳಗಾಗಿದ್ದ ಎಪ್‌ಸ್ಟೈನ್‌ 2019ರಲ್ಲಿ ಕಾರಾಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

‘ಎಪ್‌ಸ್ಟೈನ್‌ ಹಗರಣದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರೂ ಇದೆ. ಹೀಗಾಗಿಯೇ ಅದಕ್ಕೆ ಸಂಬಂಧಿಸಿದ ದಾಖಲೆಗಳು (ಎಪ್‌ಸ್ಟೈನ್‌) ಇನ್ನೂ ಸಾರ್ವಜನಿಕವಾಗಿ ಬಿಡುಗಡೆಯಾಗಿಲ್ಲ’ ಎಂಬ ಆರೋಪ ಕೇಳಿಬಂದಿತ್ತು. ಜೆಫ್ರಿ, ಬಾಲಕಿಯರ ಕಳ್ಳಸಾಗಣೆ ಮಾಡುತ್ತಿರುವ ಕುರಿತು ತಮಗೆ ಮಾಹಿತಿ ಇಲ್ಲ ಎಂದೇ ಟ್ರಂಪ್‌ ಹೇಳಿಕೊಂಡು ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.