ADVERTISEMENT

ಜವಾಹಿರಿ ಹತ್ಯೆ; ನಿಖರ ದಾಳಿಯ ಹಿಂದೆ ಹತ್ತು ವರ್ಷಗಳ ಶ್ರಮ

ಪ್ರಜಾವಾಣಿ ವಿಶೇಷ
Published 3 ಆಗಸ್ಟ್ 2022, 11:07 IST
Last Updated 3 ಆಗಸ್ಟ್ 2022, 11:07 IST
ಬಿನ್‌ ಲಾಡೆನ್ ಮತ್ತು ಜವಾಹಿರಿ   -ಎಎಫ್‌ಪಿ ಚಿತ್ರ
ಬಿನ್‌ ಲಾಡೆನ್ ಮತ್ತು ಜವಾಹಿರಿ   -ಎಎಫ್‌ಪಿ ಚಿತ್ರ   

ಅಯ್ಮನ್ ಅಲ್ ಜವಾಹಿರಿ ಹತ್ಯೆ ಕಾರ್ಯಾಚರಣೆಯು ಅತ್ಯಂತ ಸುದೀರ್ಘವಾದುದಾಗಿತ್ತು ಎಂದು ಅಮೆರಿಕದ ಸಿಐಎ ಅಧಿಕಾರಿಗಳು ಹೇಳಿದ್ದಾರೆ. ಜವಾಹಿರಿ ಹತ್ಯೆಗೆ ಕಾರ್ಯಾಚರಣೆ ಆರಂಭಿಸಿ 10 ವರ್ಷಗಳಿಗೂ ಹೆಚ್ಚು ಕಾಲ ಸಂದಿದೆ. ಅಷ್ಟು ದೀರ್ಘಾವಧಿಯ ಕಾರ್ಯಾಚರಣೆ ಆಗಿದ್ದಕ್ಕೇ, ಅದರ ನಿಖರತೆ ಹೆಚ್ಚು. ಹೀಗಾಗಿಯೇ ನಾಗರಿಕರು ಮತ್ತು ಜವಾಹಿರಿ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರಿಗೂ ಗಾಯಗಳಾಗದಂತೆ ಆತನನ್ನು ಕೊಲ್ಲಲು ಸಾಧ್ಯವಾಗಿದೆ ಎಂದು ಸಿಐಎ ಅಧಿಕಾರಿಗಳು ಹೇಳಿದ್ದಾರೆ. ಈ ಕಾರ್ಯಾಚರಣೆಯ ಪ್ರಮುಖ ಘಟ್ಟಗಳು ಹೀಗಿವೆ

1. 2011–12ರಲ್ಲಿ, ಜವಾಹಿರಿಯನ್ನು ಪತ್ತೆ ಮಾಡಲು ಸಿಐಎ ಅಧಿಕಾರಿಗಳನ್ನು ಅಫ್ಗಾನಿಸ್ತಾನದ ವಿವಿಧೆಡೆ ನಿಯೋಜಿಸಲಾಗಿತ್ತು. ಈ ಅಧಿಕಾರಿಗಳು, ಜವಾಹಿರಿಯ ಸಂಪರ್ಕದಲ್ಲಿದ್ದ ಅಲ್‌ ಕೈದಾದ ನಾಯಕರು ಮತ್ತು ಸದಸ್ಯರ ಜಾಲದ ಬೆನ್ನು ಹತ್ತಿದ್ದರು. ಜವಾಹಿರಿ ಅಜ್ಞಾತವಾಗಿದ್ದ ಕಾರಣ, ಈ ಜಾಲದ ಮೂಲಕವೇ ಆತನ ಇರುವಿಕೆಯನ್ನು ಖಚಿತಪಡಿಸಿಕೊಳ್ಳಬೇಕಿತ್ತು

2. ಈ ಜಾಲದ ಬೆನ್ನುಹತ್ತಿದ್ದರ ಪರಿಣಾಮವಾಗಿ ಜವಾಹಿರಿಯ ಪತ್ನಿ ಮತ್ತು ಕುಟುಂಬದ ಸದಸ್ಯರ ವಸತಿ ಮತ್ತು ಓಡಾಟದ ಮಾಹಿತಿಯನ್ನು ಕಲೆಹಾಕಲಾಗಿತ್ತು. ಅಫ್ಗಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆಯುವ ಕೆಲವೇ ತಿಂಗಳು ಮೊದಲು, ಕಾಬೂಲ್‌ನ ಕೇಂದ್ರ ಭಾಗದಲ್ಲಿರುವ ಶೇರ್‌ಪುರ್‌ ಕಾಲೊನಿಗೆ ಜವಾಹಿರಿಯ ಪತ್ನಿ ಮತ್ತು ಕುಟುಂಬದ ಸದಸ್ಯರು ಸ್ಥಳಾಂತರವಾಗಿದ್ದರು

ADVERTISEMENT

3. ಶೇರ್‌ಪುರದ ನಿವಾಸಕ್ಕೆ ಭಿಗಿ ಭದ್ರತೆ ಇತ್ತು. ದೊಡ್ಡ ಬಂಗಲೆಯ ಸುತ್ತ ಹತ್ತು ಅಡಿಗೂ ಎತ್ತರದ ಗೋಡೆ ಮತ್ತು ಅದರ ಮೇಲೆ ಮುಳ್ಳು ಬೇಲಿ ಅಳವಡಿಸಲಾಗಿತ್ತು. ಜವಾಹಿರಿ ಕುಟುಂಬದ ಸದಸ್ಯರ ಓಡಾಟ ಇರಲಿಲ್ಲ. ಆದರೆ ಸರಿಯಾಗಿ ವರ್ಷದ ಹಿಂದೆ ಜವಾಹಿರಿ, ಈ ಬಂಗಲೆಗೆ ಬಂದಿದ್ದ. ನಂತರ ಒಮ್ಮೆಯೂ ಆತ ಬಂಗಲೆಯಿಂದ ಹೊರಗೆ ಬಂದಿರಲಿಲ್ಲ

4. ಈ ಬಂಗಲೆಯಲ್ಲಿ ಜವಾಹಿರಿ ಇರುವುದು ಖಚಿತವಾಗಿದ್ದರೂ, ಏಕಾಏಕಿ ದಾಳಿ ನಡೆಸದೇ ಇರಲು ನಿರ್ಧರಿಸಲಾಗಿತ್ತು. ಕಾರ್ಯಾಚರಣೆ ವೇಳೆ ನಾಗರಿಕರು, ಜವಾಹಿರಿಯ ಕುಟುಂಬದ ಸದಸ್ಯರಿಗೆ ಹಾನಿಯಾಗುವುದನ್ನು ಮತ್ತು ಸಾರ್ವಜನಿಕರ ಸ್ವತ್ತುಗಳಿಗೆ ಹಾನಿಯಾಗುವುದನ್ನು ತಡೆಯಬೇಕಿತ್ತು. ಹೀಗಾಗಿ ಜವಾಹಿರಿಯ ದೈನಂದಿನ ಚಟುವಟಿಕೆಗಳನ್ನು ಗಮನಿಸಲು ಆರಂಭಿಸಲಾಯಿತು

5. ಜವಾಹಿರಿಯು ಪ್ರತಿದಿನ ಆ ಬಂಗಲೆಯ ಬಾಲ್ಕನಿಗೆ ಬಂದು ಕೆಲ ಗಂಟೆಗಳನ್ನು ಕಳೆಯುತ್ತಿದ್ದ. ಪ್ರತಿದಿನ ಅವನ ಕುಟುಂಬದ ಸದಸ್ಯರೂ ಅವನ ಜತೆಗೆ ಇರುತ್ತಿದ್ದರು. ಆದರೆ, ಕೆಲ ಸಮಯ ಆತ ಏಕಾಂತದಲ್ಲಿ ಇರುತ್ತಿದ್ದ. ಆತ ಏಕಾಂತದಲ್ಲಿ ಇರುವ ಸಮಯದಲ್ಲೇ ದಾಳಿ ನಡೆಸಬೇಕು ಎಂದು ಯೋಜಿಸಲಾಯಿತು

6. ಜವಾಹಿರಿಯ ಇರುವಿಕೆ, ಆತನ ದೈನಂದಿನ ಚಟುವಟಿಕೆ ಮತ್ತು ಕಾರ್ಯಾಚರಣೆಯ ಸಾಧ್ಯತೆಗಳ ಬಗ್ಗೆ ಸಿಐಎ ಅಧಿಕಾರಿಗಳು ಅಮೆರಿಕದ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ 2022ರ ಏಪ್ರಿಲ್‌ನಲ್ಲಿ ಮಾಹಿತಿ ನೀಡಿದ್ದರು. ಅಧ್ಯಕ್ಷ ಜೋ ಬೈಡನ್‌ ಅವರಿಗೂ ಮಾಹಿತಿ ನೀಡಲಾಗಿತ್ತು. ಕಾರ್ಯಾಚರಣೆಯ ಯೋಜನೆಯ ವಿವರಗಳನ್ನು ಅಧ್ಯಕ್ಷ ಬೈಡನ್ ಅವರಿಗೆ ಜುಲೈ 1ರಂದು ನೀಡಲಾಗಿತ್ತು. ‘ಈ ಮಾಹಿತಿಯನ್ನು ಕಲೆಹಾಕಿದ್ದು ಹೇಗೆ ಮತ್ತು ಅವು ಎಷ್ಟು ಸತ್ಯ’ ಎಂದು ಬೈಡನ್ ಪ್ರಶ್ನಿಸಿದ್ದರು

7. ಜವಾಹಿರಿ ಉಳಿದುಕೊಂಡಿರುವ ಮನೆಯ ಮಾದರಿಯನ್ನು ರಚಿಸಿ, ಕಾರ್ಯಾಚರಣೆಯ ಪ್ರಾತ್ಯಕ್ಷಿಕೆಯನ್ನು ಬೈಡನ್ ಅವರಿಗೆ ತೋರಿಸಲಾಗಿತ್ತು. ಕಾರ್ಯಾಚರಣೆ ನಡೆಸುವ ಬಗ್ಗೆ ಬೈಡನ್ ಅವರು ತಮ್ಮ ಸಂಪುಟದ ಸದಸ್ಯರಿಗೆ ಜುಲೈ 25ರಂದು ಮಾಹಿತಿ ನೀಡಿದ್ದರು. ಕಾರ್ಯಾಚರಣೆಯ ನಂತರ ಒದಗಬಹುದಾದ ರಾಜತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ನಂತರ ಕಾರ್ಯಾಚರಣೆಗೆ ಒಪ್ಪಿಗೆ ನೀಡಲಾಗಿತ್ತು

8. ಜುಲೈ 31ರ ಭಾನುವಾರ ಬೆಳಿಗ್ಗೆ 6.18ರ ಹೊತ್ತಿಗೆ, ಜವಾಹಿರಿ ಈ ಬಂಗಲೆಯ ಬಾಲ್ಕನಿಯಲ್ಲಿ ಏಕಾಂಗಿಯಾಗಿ ಇದ್ದ. ಆಗ ಡ್ರೋನ್‌ಗಳ ಮೂಲಕ ‘ಹೆಲ್‌ಪೈರ್ ಆರ್9ಎಕ್ಸ್‌’ ಕ್ಷಿಪಣಿಗಳನ್ನು ಉಡಾಯಿಸಲಾಯಿತು. ಅವು ಗುರಿ ನಿರ್ದೇಶಿತ ಕ್ಷಿಪಣಿಗಳಾದ ಕಾರಣ, ಕರಾರುವಕ್ಕಾಗಿ ಜವಾಹಿರಿಯ ಮೇಲೆ ನುಗ್ಗಿದವು. ಕಾರ್ಯಾಚರಣೆಯಲ್ಲಿ ಜವಾಹಿರಿ ಹತನಾದ

ಕಾಬೂಲ್‌ ಹೃದಯಭಾಗದಲ್ಲಿ ಇದ್ದ ಜವಾಹಿರಿ

ಅಲ್‌ ಕೈದಾ ಸೇರಿದಂತೆ ಯಾವುದೇ ಉಗ್ರ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ನೆಲೆಯೂರಲು ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ಹೇಳಿತ್ತು. ಆದರೆ, ಕಾಬೂಲ್‌ನ ಹೃದಯಭಾಗದಲ್ಲೇ ಜವಾಹಿರಿಯ ಬಂಗಲೆ ಇತ್ತು ಮತ್ತು ಆತ ಒಂದು ವರ್ಷದಿಂದ ಅಲ್ಲಿಯೇ ನೆಲೆಸಿದ್ದ ಎಂಬುದು ಈ ಕಾರ್ಯಾಚರಣೆಯಿಂದ ಬಹಿರಂಗವಾಗಿದೆ.

ಜವಾಹಿರಿ ಇದ್ದ ಬಂಗಲೆಯ ಸುತ್ತ ಅಫ್ಗಾನಿಸ್ತಾನದ ಸರ್ಕಾರದ ಪ್ರಮುಖ ಕಚೇರಿಗಳು, ಹಲವು ಸಚಿವಾಲಯಗಳು ಮತ್ತು ವಿವಿಧ ದೇಶಗಳ ರಾಯಭಾರ ಕಚೇರಿಗಳು ಇವೆ. ಆ ಬಂಗಲೆಯಿಂದ ಕೇವಲ 350 ಮೀಟರ್‌ ದೂರದಲ್ಲಿ ಬ್ರಿಟನ್‌ ರಾಯಭಾರ ಕಚೇರಿ ಇದೆ. ಅಲ್ಲಿಂದ ಕೂಗಳತೆ ದೂರದಲ್ಲಿ ಅಮೆರಿಕ, ಇರಾನ್‌, ಫ್ರಾನ್ಸ್‌, ಕೆನಡ ರಾಯಭಾರ ಕಚೇರಿಗಳಿವೆ.

ಜವಾಹಿರಿ ಇದ್ದ ಬಂಗಲೆಯಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ಅಫ್ಗಾನಿಸ್ತಾನ ಅಧ್ಯಕ್ಷರ ಅರಮನೆ ಮತ್ತು ಕಚೇರಿ ಇದೆ. ಇಷ್ಟು ಬಿಗಿಭದ್ರತೆಯಿರುವ ಪ್ರದೇಶದಲ್ಲಿ ಜವಾಹಿರಿ ನೆಲೆಸಿದ್ದ.

ನಿಂಜಾ ಬಾಂಬ್‌ ‘ಹೆಲ್‌ಫೈರ್‌ ಆರ್‌9ಎಕ್ಸ್‌’

ಜವಾಹಿರಿಯನ್ನು ಕೊಲ್ಲಲು ಅಮೆರಿಕವು ತನ್ನ ಖ್ಯಾತ ‘ನಿಂಜಾ ಬಾಂಬ್‌’ ಅನ್ನು ಬಳಸಿದೆ. ನಿಂಜಾ ಬಾಂಬ್‌ ಎಂಬುದು ಅದರ ಜನಪ್ರಿಯ ಹೆಸರಾದರೂ, ಅದರ ನಿಜವಾದ ಹೆಸರು ‘ಹೆಲ್‌ಫೈರ್‌ ಆರ್‌9ಎಕ್ಸ್‌’. ವಾಸ್ತವದಲ್ಲಿ ಇದು ಬಾಂಬ್‌ ಅಲ್ಲ, ಬದಲಿಗೆ ಒಂದು ಕ್ಷಿಪಣಿ.

ಹೆಲ್‌ಫೈರ್ ಆರ್9ಎಕ್ಸ್‌ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದು, ಗುರಿ ನಿರ್ದೇಶಿತ ಕ್ಷಿಪಣಿಯಾಗಿದೆ. ಅಂದರೆ ಒಮ್ಮೆ ಗುರಿಯನ್ನು ನಿಗದಿ ಮಾಡಿ, ಉಡಾಯಿಸಿದರೆ ಸಾಕು. ಅದು ಗುರಿಯನ್ನು ಕರಾರುವಾಕ್ಕಾಗಿ ತಲುಪುತ್ತದೆ.

ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆ, ಬಾಂಬ್‌ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ, ಸಿಡಿತಲೆ ಇಲ್ಲದ ಅವತರಣಿಕೆಯನ್ನು ಇಂತಹ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಗುರಿಗೆ ಮಾತ್ರ ಹಾನಿಯಾಗಬೇಕು, ಇತರರಿಗೆ ಹಾನಿಯಾಗಬಾರದು ಎಂಬುದು ಇದರ ಉದ್ದೇಶ. ರಹಸ್ಯ ಕಾರ್ಯಾಚರಣೆಗಳಲ್ಲಿ ಉಗ್ರರನ್ನು ಕೊಲ್ಲಲು ಅಮೆರಿಕವು ಈ ಕ್ಷಿಪಣಿಯನ್ನು ಬಳಸುತ್ತಿದೆ. ಈ ಕ್ಷಿಪಣಿಯನ್ನು ಉಡಾಯಿಸಿದಾಗ ಅದು, ಗುರಿಯನ್ನು ಛೇದಿಸುತ್ತದೆ. ಆದರೆ, ಸ್ಪೋಟಗೊಳ್ಳುವುದಿಲ್ಲ. ಹೀಗಾಗಿ ಸುತ್ತಮುತ್ತಲಿನವರಿಗೆ ಮತ್ತು ಸ್ವತ್ತುಗಳಿಗೆ ಹಾನಿಯಾಗುವುದಿಲ್ಲ.

ಜವಾಹಿರಿ ಹತ್ಯೆ ಅಮೆರಿಕದ ಸೇಡು

ವಾಷಿಂಗ್ಟನ್‌, ಕಾಬೂಲ್‌ (ರಾಯಿಟರ್ಸ್‌/ಪಿಟಿಐ): ‘ಉಗ್ರ ಜವಾಹಿರಿ ಹತ್ಯೆ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರೆತಂತಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಜೊ ಬೈಡನ್ ಅವರು ಸೋಮವಾರ ಘೋಷಿಸಿದ್ದಾರೆ. ಅಲ್‌ ಕೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ ಹಾಗೂ ಸಂಘಟನೆಯಲ್ಲಿ ಎರಡನೇ ಮುಖ್ಯ ಹುದ್ದೆಯಲ್ಲಿದ್ದ ಅಯ್ಮಲ್ ಅಲ್ ಜವಾಹಿರಿ ತಂತ್ರಗಾರಿಕೆ ರೂಪಿಸಿ 2001ರಲ್ಲಿ ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಅವಳಿ ಕಟ್ಟಡಗಳನ್ನು ಧ್ವಂಸ ಮಾಡಿದ್ದರು. ಈ ವಿಧ್ವಂಸಕ ಕೃತ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಈ ಘಟನೆ ನಡೆದ 10 ವರ್ಷಗಳ ಬಳಿಕ ಲಾಡೆನ್‌ನನ್ನು ಅಮೆರಿಕ ಹತ್ಯೆ ಮಾಡಿತು. ಲಾಡೆನ್ ಸತ್ತ 11 ವರ್ಷಗಳ ಬಳಿಕ ಜವಾಹಿರಿಯನ್ನು ಅಮೆರಿಕ ಹತ್ಯೆ ಮಾಡಿದೆ.

ಲಾಡೆನ್‌ ಬಳಿಕ ಅಲ್ ಕೈದಾ ನಾಯಕತ್ವವನ್ನು ಜವಾಹಿರಿ ವಹಿಸಿಕೊಂಡ. ಈಜಿಪ್ಟ್‌ನವನಾದ ಈತ ವೃತ್ತಿಯಲ್ಲಿ ವೈದ್ಯನಾಗಿದ್ದ. ಈತ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದವನು. 1986ರಲ್ಲಿ ಲಾಡೆನ್‌ನನ್ನು ಭೇಟಿಯಾದ ಜವಾಹಿರಿ, ಖಾಸಗಿ ವೈದ್ಯ ಹಾಗೂ ಸಲಹೆಗಾರನಾಗಿ ನೇಮಕವಾದ. ಕಣ್ಣಿನ ಸರ್ಜನ್ ಆಗಬೇಕಿದ್ದವನು ಮೂರೇ ವರ್ಷಗಳಲ್ಲಿ ಜಾಗತಿಕ ಉಗ್ರನಾಗಿ ಬೆಳೆದ.

1993ರಲ್ಲಿ ಈಜಿಪ್ಟ್‌ನಲ್ಲಿ ಈತ ವಿದ್ವಂಸಕ ಕೃತ್ಯಗಳನ್ನು ನಡೆಸಿದ್ದ. ಅಲ್ಲಿನ ಸರ್ಕಾರವನ್ನು ಉರುಳಿಸಿ, ಕಟ್ಟುನಿಟ್ಟಿನ ಇಸ್ಲಾಂ ಕಾನೂನಿನ ಆಡಳಿತ ಸ್ಥಾಪಿಸಿದ. ಈ ಅವಧಿಯಲ್ಲಿ 1200ಕ್ಕೂ ಅಧಿಕ ಈಜಿಪ್ಟಿಯನ್ನರ ಸಾವಿಗೆ ಕಾರಣನಾದ ಎನ್ನಲಾಗಿದೆ. 1998ರಲ್ಲಿ ಈಜಿಪ್ಟ್‌ ಇಸ್ಲಾಮ್ ಜಿಹಾದ್ ಎಂಬ ಸಂಘಟನೆಯನ್ನು ಅಲ್‌ ಕೈದಾ ಜೊತೆ ವಿಲೀನ ಮಾಡಿದ. 1998ರಲ್ಲಿ, ಕೆನ್ಯಾದ ನೈರೋಬಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಹಾಗೂ ತಾಂಜಾನಿಯಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ 12 ಅಮೆರಿಕನ್ನರೂ ಸೇರಿ 224 ಜನರು ಹತರಾದರು. ಇದರ ಸಂಚುಕೋರ ಜವಾಹಿರಿ ಎಂದು ಆರೋಪಿಸಲಾಗಿದೆ.

2001ರ ಸೆಪ್ಟೆಂಬರ್ 11ರಂದು ಲಾಡೆನ್ ಹಾಗೂ ಜವಾಹಿರಿ ಸೇರಿ ಬಹುದೊಡ್ಡ ವಿಧ್ವಂಸಕ ಕೃತ್ಯ ನಡೆಸಿದರು. ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ದಾಳಿ ನಡೆಸಿ, ಸುಮಾರು 3,000 ಜನರ ಸಾವಿಗೆ ಕಾರಣರಾದರು. ಇದು ಅಮೆರಿಕ ಸೇರಿ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿತ್ತು.

2003ರಲ್ಲಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 9 ಅಮೆರಿಕನ್ನರೂ ಸೇರಿ 23 ಜನ ಮೃತಪಟ್ಟರು. ಲಾಡೆನ್ ಹಾಗೂ ಜವಾಹಿರಿ ಸೇರಿ ಈ ಕೃತ್ಯ ನಡೆಸಿದ್ದರು. ಇದಾದ ಬಳಿಕ ಜವಾಹಿರಿ ಅಲೈ ಕೈದಾದ ಬಹುಮುಖ್ಯ ನಾಯಕನಾಗಿ ಬೆಳೆದ. ಜಾಗತಿಕವಾಗಿ ಸಂಘಟನೆ ವಿಸ್ತರಣೆ ಹಾಗೂ ಉಗ್ರರ ನೇಮಕಕ್ಕೆ ಅಲ್‌ ಕೈದಾ ಹೆಚ್ಚು ಗಮನ ನೀಡಿತು.

ಕೆಲವು ವಿಡಿಯೊಗಳು ಹಾಗೂ ಧ್ವನಿಮುದ್ರಿಕೆಗಳಲ್ಲಿ ಜವಾಹಿರಿ ಇರುವಿಕೆ ದಾಖಲಾಗಿದ್ದು ಬಿಟ್ಟರೆ, ಅವನು ಎಲ್ಲಿದ್ದಾನೆ ಎಂಬ ವಿಚಾರ ಹಲವು ವರ್ಷಗಳಿಂದ ನಿಗೂಢವಾಗಿಯೇ ಉಳಿದಿತ್ತು. 2006ರ ಜನವರಿಯಲ್ಲಿ, ಪಾಕಿಸ್ತಾನ–ಅಫ್ಗಾನಿಸ್ತಾನದ ಗಡಿಯಲ್ಲಿ ಜವಾಹಿರಿಯನ್ನು ಕ್ಷಿಪಣಿ ದಾಳಿ ಮೂಲಕ ಹತ್ಯೆ ಮಾಡುವ ಅಮೆರಿಕದ ಯತ್ನ ವಿಫಲವಾಗಿತ್ತು. ಈ ದಾಳಿಯಲ್ಲಿ ಅಲ್ ಕೈದಾದ ನಾಲ್ವರು ಹತರಾಗಿದ್ದರೂ, ಜವಾಹಿರಿ ತಪ್ಪಿಸಿಕೊಂಡಿದ್ದ. ಎರಡು ವಾರಗಳ ಬಳಿಕ ಕಳುಹಿಸಿದ ವಿಡಿಯೊ ಸಂದೇಶದಲ್ಲಿ ತಾನಿನ್ನೂ ಬದುಕಿದ್ದೇನೆ ಎಂದು ಸವಾಲೆಸೆದಿದ್ದ.

ಲಾಡೆನ್ ಹಾಗೂ ಜವಾಹಿರಿ ಇಬ್ಬರೂ ಅಮೆರಿಕದ ಅತಿಬೇಡಿಕೆಯ ಉಗ್ರರ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದರು. 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಲಾಡೆನ್‌ನನ್ನು ಹತ್ಯೆ ಮಾಡುವಲ್ಲಿ ಅಮೆರಿಕ ಯಶಸ್ವಿಯಾಯಿತು. ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರ ಕಾಲದಲ್ಲಿ ಲಾಡೆನ್ ಅಂತ್ಯವಾಯಿತು. ಈ ಕಾರ್ಯಾಚರಣೆಯನ್ನು ಒಬಾಮಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಇದೇ ಅವಧಿಯಲ್ಲಿ ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೊ ಬೈಡನ್, ಕಾರ್ಯಾಚರಣೆಯನ್ನು ಹತ್ತಿರದಿಂದ ಗಮನಿಸಿದ್ದರು.

ತಾಲಿಬಾನ್, ಹಕ್ಕಾನಿ ಜಾಲದ ಉಗ್ರರ ಜೊತೆ ನಿಕಟ ಸಂಪರ್ಕ ಹೊಂದಿರುವ ಜವಾಹಿರಿ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಜವಾಹಿರಿ ಬದುಕುಳಿದಿರುವ ಬಗ್ಗೆ ಪ್ರಶ್ನೆಗಳಿದ್ದವು. ಆದರೆ ಅಫ್ಗಾನಿಸ್ತಾನವು ತಾಲಿಬಾನ್ ತೆಕ್ಕೆಗೆ ಸಿಕ್ಕ ಬಳಿಕ, ಜವಾಹಿರಿ ತನ್ನ ಮನೆಯ ಬಾಲ್ಕನಿಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳತೊಡಗಿದ.ಅಫ್ಗಾನಿಸ್ತಾನದಿಂದ ತನ್ನ ಸೇನೆಯನ್ನು ವಾಪಸ್ ಪಡೆದ ಒಂದು ವರ್ಷದಲ್ಲಿ ಅಮೆರಿಕವು ಜವಾಹಿರಿ ಹತ್ಯೆ ಮಾಡಿ ಮುಗಿಸಿದೆ.‘ಪ್ರತೀಕಾರಕ್ಕೆ ಎಷ್ಟು ವರ್ಷ ಹಿಡಿಯಿತು ಎಂಬುದು ಇಲ್ಲಿ ಮುಖ್ಯವಲ್ಲ. ಅಮೆರಿಕದ ಜನರಿಗೆ ಬೆದರಿಕೆ ಒಡ್ಡಿದರೆ,ಉಗ್ರ ಎಲ್ಲಿಯೇ ಅಡಗಿದ್ದರೂ ಅಮೆರಿಕ ಅವನನ್ನು ಹುಡುಕಿ ಅಂತ್ಯ ಕಾಣಿಸುತ್ತದೆ’ ಎಂದು ಬೈಡನ್‌ ಹೇಳಿದ್ದಾರೆ.

ಜವಾಹಿರಿ ಉತ್ತರಾಧಿಕಾರಿ ಯಾರು?

ಲಾಡೆನ್ ಬಳಿಕ ಜವಾಹಿರಿ ಅಲ್ ಕೈದಾ ನೇತೃತ್ವ ವಹಿಸಿದ್ದ. ಜವಾಹಿರಿಯ ಬಳಿಕ ಉತ್ತರಾಧಿಕಾರಿ ಯಾರು ಎಂಬ ಚರ್ಚೆಇದೀಗ ಶುರುವಾಗಿದೆ. ಲಾಡೆನ್‌ನ ನಿಕಟವರ್ತಿ ಹಾಗೂ ಈಜಿಪ್ಟ್‌ ಇಸ್ಲಾಂ ಜಿಹಾದ್‌ನ ಸದಸ್ಯ ಸೈಫ್ ಅಲ್ ಅದೆಲ್‌ನತ್ತ ಬೊಟ್ಟು ಮಾಡಲಾಗುತ್ತಿದೆ.

ಲಾಡೆನ್‌ನ ಭದ್ರತೆಯ ಜವಾಬ್ದಾರಿಯನ್ನು ಸೈಫ್‌ ಹೊತ್ತಿದ್ದ. ಅಮೆರಿಕದ ಎಫ್‌ಬಿಐನ ಜಾಗತಿಕ ಉಗ್ರರ ಪಟ್ಟಿಯಲ್ಲಿ2001ರಲ್ಲಿ ಈತನನ್ನು ಸೇರಿಸಲಾಗಿತ್ತು. ಈತನ ಹತ್ಯೆಗೆ ₹80 ಕೋಟಿ ಬಹುಮಾನ ಘೋಷಿಸಲಾಗಿತ್ತು. 1993ರಿಂದಲೂ ಅಮೆರಿಕ ಇವನಿಗಾಗಿ ಹುಡುಕುತ್ತಿದೆ. ಸೊಮಾಲಿಯಾದ ಮಗದುಶುವಿನಲ್ಲಿ ಅಮೆರಿಕದ ಪಡೆಗಳ ಮೇಲೆ ದಾಳಿ ಎಸಗಿ, 18 ಅಮೆರಿಕನ್ನರ ಸಾವಿಗೆ ಕಾರಣನಾದ ಆರೋಪ ಸೈಫ್ ಮೇಲಿದೆ. ಆಗ ಈತನಿಗೆ 30 ವರ್ಷ ವಯಸ್ಸಾಗಿತ್ತು. ಲಾಡೆನ್ ಹತ್ಯೆ ಬಳಿಕ ಸಂಘಟನೆಯ ಕಾರ್ಯತಂತ್ರ ರೂಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಈಗ ಇರಾನ್‌ನಲ್ಲಿ ವಾಸಿಸುತ್ತಿರುವ ಸೈಫ್‌ನನ್ನು ಅಲ್ ಕೈದಾ ಮುಖ್ಯಸ್ಥನನ್ನಾಗಿ ಮಾಡಿದರೆ, ಸಂಘಟನೆಗೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯವೂ ಇದೆ.

ಜವಾಹಿರಿ ಇದ್ದ ಬಂಗಲೆ ಮತ್ತು ಆತನ ಹತ್ಯೆ ನಡೆದ ಸ್ಥಳದ ಬಗ್ಗೆ ಮಾಹಿತಿ ನಿಡುವ ಗ್ರಾಫಿಕ್‌

ಆಧಾರ: ರಾಯಿಟರ್ಸ್‌, ರಾಯಿಟರ್ಸ್‌ ಗ್ರಾಫಿಕ್ಸ್‌, ಗೂಗಲ್‌ ನಕ್ಷೆ, ಗೂಗಲ್ ಅರ್ಥ್ ನಕ್ಷೆ, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.