ADVERTISEMENT

ಕಾಬೂಲ್‌ ವಿಮಾನ ನಿಲ್ದಾಣದ ಸಮೀಪ ರಾಕೆಟ್‌ ದಾಳಿ; ಮಗು ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 13:49 IST
Last Updated 29 ಆಗಸ್ಟ್ 2021, 13:49 IST
ಕಾಬೂಲ್‌ನಲ್ಲಿ ಭದ್ರತೆಯ ಹೊಣೆ ಹೊತ್ತಿರುವ ತಾಲಿಬಾನ್‌ನ ವಿಶೇಷ ಪಡೆ
ಕಾಬೂಲ್‌ನಲ್ಲಿ ಭದ್ರತೆಯ ಹೊಣೆ ಹೊತ್ತಿರುವ ತಾಲಿಬಾನ್‌ನ ವಿಶೇಷ ಪಡೆ   

ಕಾಬೂಲ್‌: ತಾಲಿಬಾನ್‌ ಹಿಡಿತದಲ್ಲಿರುವ ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮತ್ತೆ ಸ್ಫೋಟದ ಸದ್ದು ಕೇಳಿದೆ. ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಭಾನುವಾರ ರಾಕೆಟ್‌ದಾಳಿ ನಡೆದಿದ್ದು, ಮಗುವೊಂದು ಸಾವಿಗೀಡಾಗಿದೆ.

ಇದು ಉಗ್ರರು ನಡೆಸಿರುವ ದಾಳಿ ಎಂದು ಶಂಕಿಸಲಾಗಿದೆ. ವಿಮಾನ ನಿಲ್ದಾಣದ ಬಳಿಯ ಮನೆಗೆ ರಾಕೆಟ್‌ ಅಪ್ಪಳಿಸಿದ್ದು, ದಟ್ಟವಾದ ಹೊಗೆ ಆವರಿಸಿಕೊಂಡಿದೆ. ವಿಮಾನ ನಿಲ್ದಾಣ ಪ್ರದೇಶದಲ್ಲಿ ಮತ್ತೊಂದು ದಾಳಿ ನಡೆಯಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿ ಸಂಭವಿಸಿದೆ.

ಐಸಿಸ್‌ ಉಗ್ರರನ್ನು ಗುರಿಯಾಗಿಸಿ ಅಮೆರಿಕ ಸೇನಾ ಪಡೆಯು ಕಾಬೂಲ್‌ನಲ್ಲಿಕಾರ್ಯಾಚರಣೆ ನಡೆಸಿರುವುದಾಗಿ ವರದಿಯಾಗಿದೆ.

ADVERTISEMENT

ಇತ್ತೀಚೆಗಷ್ಟೇ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಐಸಿಸ್‌ ಉಗ್ರರು ಗುಂಡಿನ ದಾಳಿ ಹಾಗೂ ಆತ್ಮಹತ್ಯಾ ದಾಳಿ ನಡೆಸಿದ್ದರು. ಘಟನೆಯಲ್ಲಿ ಅಮೆರಿಕದ ಯೋಧರು, ಅಫ್ಗಾನ್‌ ನಾಗರಿಕರು, ತಾಲಿಬಾನಿಗಳು ಸೇರಿದಂತೆ ನೂರಾರು ಜನರು ಸಾವಿಗೀಡಾದರು.

ಕಾಬೂಲ್‌ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಸುಮಾರು 169 ಅಫ್ಗನ್ನರು ಮೃತಪಟ್ಟಿದ್ದಾರೆ. ಅಮೆರಿಕ ಸೇನೆಯ 13 ಮಂದಿ ಸಾವಿಗೀಡಾಗಿದ್ದಾರೆ.

ಮುಂದಿನ 24ರಿಂದ 36 ಗಂಟೆಗಳಲ್ಲಿ ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ಉಗ್ರರು ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಕೆ ನೀಡಿದ್ದರು. ಅಫ್ಗಾನಿಸ್ತಾನದಿಂದ ಇದೇ 31ರೊಳಗೆ ತನ್ನ ಪ್ರಜೆಗಳನ್ನು ಕರೆತರುವ ಕಾರ್ಯಕ್ಕೆ ಗಡುವು ಸಮೀಪಿಸುತ್ತಿರುವಂತೆಯೇ ಅಮೆರಿಕ ತೆರವು ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.