ADVERTISEMENT

ದತ್ತು ಪುತ್ರನ ಕೊಲೆ: ಆರೋಪಿಗಳ ಹಸ್ತಾಂತರಕ್ಕೆ ನಕಾರ

ಗುಜರಾತ್‌ ಮೂಲದ ದಂಪತಿ ವಿರುದ್ಧ ಆರೋಪ

ಪಿಟಿಐ
Published 7 ಜುಲೈ 2019, 20:00 IST
Last Updated 7 ಜುಲೈ 2019, 20:00 IST
ಎಮ್ಮಾ ಆರ್ಬಥ್ನಾಟ್‌
ಎಮ್ಮಾ ಆರ್ಬಥ್ನಾಟ್‌   

ಲಂಡನ್‌: ಕೊಲೆ ಆರೋಪ ಎದುರಿಸುತ್ತಿದ್ದ ದಂಪತಿಯನ್ನು ಹಸ್ತಾಂತರಿಸುವಂತೆ ಕೋರಿದ್ದ ಮನವಿಯನ್ನು ಇಲ್ಲಿನ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ ತಿರಸ್ಕರಿಸಿದೆ. ಹೀಗಾಗಿ, ಕೊಲೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಬೇಕು ಎಂಬ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಭಾರತ ಮೂಲದ ಬ್ರಿಟನ್‌ ಪ್ರಜೆಗಳಾದ ಆರತಿ ಧಿರ್‌ ಹಾಗೂ ಪತಿ ಕವಲ್‌ ರಾಯ್‌ಜಾದಾ ಹಸ್ತಾಂತರಕ್ಕೆ ಭಾರತ ಮನವಿ ಮಾಡಿತ್ತು. 11 ವರ್ಷದ ದತ್ತು ಪುತ್ರ ಹಾಗೂ ಆತನ ಭಾವನನ್ನು ಕೊಲೆ ಮಾಡಿದ ಆರೋಪ ದಂಪತಿ ಮೇಲಿದೆ.

ಭಾರತದ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ, ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್‌ ಮಲ್ಯ ಸಹ ಹಸ್ತಾಂತರಗೊಳ್ಳಬೇಕಿತ್ತು. ಆದರೆ, ಹಸ್ತಾಂತರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಇಲ್ಲಿನ ಹೈಕೋರ್ಟ್‌ ಅನುಮತಿ ನೀಡಿದೆ. ಹೀಗಾಗಿ, ಆರೋಪಿಗಳ ಹಸ್ತಾಂತರಕ್ಕೆ ಸಂಬಂಧಿಸಿ ಭಾರತ ಮತ್ತೊಂದು ಹಿನ್ನಡೆ ಅನುಭವಿಸುವಂತಾಗಿದೆ.

ADVERTISEMENT

ಪ್ರಕರಣದ ವಿವರ: ಗುಜರಾತ್‌ ಮೂಲದ ಆರತಿ ಧಿರ್ ಹಾಗೂ ಕವಲ್‌ ರಾಯ್‌ಜಾದಾ ಎಂಬುವವರು ಗೋಪಾಲ್‌ ಸೇಜಾನಿ ಎಂಬ ಅನಾಥ ಬಾಲಕನನ್ನು ದತ್ತು ಪಡೆದಿದ್ದರು. ಆತನ ಹೆಸರಿನಲ್ಲಿ ₹ 1.3 ಕೋಟಿ ಮೊತ್ತದ ಜೀವ ವಿಮೆ ಮಾಡಿಸಿದ್ದರು ಎನ್ನಲಾಗಿದೆ. 2017ರ ಫೆಬ್ರುವರಿಯಲ್ಲಿ ಗೋಪಾಲ್‌ನನ್ನು ಅಪಹರಿಸಲಾಗಿತ್ತು. ಆತನ ಮೇಲೆ ಹಲ್ಲೆ ನಡೆಸಿ, ಇರಿದು ರಾಜ್‌ಕೋಟ್ ಬಳಿ ಕೊಲೆ ಮಾಡಲಾಗಿತ್ತು. ಗೋಪಾಲ್‌ ರಕ್ಷಣೆಗೆ ಧಾವಿಸಿದ್ದ ಆತನ ಭಾವ ಹರ್‌ಸುಖಭಾಯಿ ಕರ್ದಾನಿ ಎಂಬಾತನನ್ನು ಸಹ ಕೊಲೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದಂಪತಿಯ ಈ ಕೃತ್ಯಕ್ಕೆ ರಾಯ್‌ಜಾದಾ ತಂದೆ ಹಾಗೂ ನಿತೀಶ್‌ ಮುಂಡ್‌ ಎಂಬುವವರು ಕೈಜೋಡಿಸಿದ್ದರು. ಬಾಲಕನನ್ನು ದತ್ತು ಪಡೆದು, ಆತನ ಹೆಸರಿನಲ್ಲಿ ವಿಮೆ ಮಾಡಿಸುವುದು. ನಂತರ ಆತನ ಕೊಲೆಯಾಗಿದೆ ಎಂದು ಬಿಂಬಿಸಿ, ವಿಮಾ ಪರಿಹಾರ ಹಣ ಪಡೆಯುವ ಸಂಚನ್ನು ಈ ದಂಪತಿ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಹಸ್ತಾಂತರ: ಮಾನವ ಹಕ್ಕು ಉಲ್ಲಂಘನೆ’

’ಆರತಿ ಧಿರ್‌ ಹಾಗೂ ರಾಯ್‌ಜಾದಾ ದಂಪತಿಯನ್ನು ಒಂದು ವೇಳೆ ಭಾರತಕ್ಕೆ ಹಸ್ತಾಂತರ ಮಾಡಿದರೆ, ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಇದು ಯುರೋಪಿಯನ್‌ ಮಾನವ ಹಕ್ಕುಗಳ ಒಡಂಬಡಿಕೆಯ ಕಲಂ 3ರ ಉಲ್ಲಂಘನೆಯಾಗುವುದರಿಂದ ದಂಪತಿಯನ್ನು ಹಸ್ತಾಂತರ ಮಾಡಲು ಆಗುವುದಿಲ್ಲ‘ ಎಂದು ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ನ ನ್ಯಾಯಾಧೀಶೆ ಎಮ್ಮಾ ಆರ್ಬಥ್ನಾಟ್‌ ಜುಲೈ 2ರಂದು ನೀಡಿದ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

’ದಂಪತಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದು. ಇಂತಹ ತೀರ್ಪನ್ನು ಮರುಪರಿಶೀಲಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿದಿದೆ. ಇದು ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ‘ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಆರೋಪಿ ದಂಪತಿಗೆ ಮರಣದಂಡನೆ ವಿಧಿಸುವುದಿಲ್ಲ ಎಂದು ಭಾರತದ ಪರವಾಗಿ ವಾದ ಮಂಡಿಸಿದ ವಕೀಲರು ಕೋರ್ಟ್‌ಗೆ ಭರವಸೆ ನೀಡಿದರು. ಆದರೆ, ಇಂತಹ ಭರವಸೆ ನೀಡಲು ಕೋರ್ಟ್‌ ನೀಡಿದ್ದ ಗಡುವು ಮುಗಿದಿದ್ದರಿಂದ, ಹಸ್ತಾಂತರ ಕೋರಿದ್ದ ಮನವಿಯನ್ನು ತಿರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.