
ತೆಹ್ರಾನ್(ಇರಾನ್): ಸಿರಿಯಾದಲ್ಲಿ ಸರ್ಕಾರ ಪತನ ಸೇರಿದಂತೆ ಇತ್ತೀಚಿನ ಘಟನೆಗಳು ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಯೋಜನೆಯ ಭಾಗವಾಗಿವೆ ಎಂದು ಇರಾನ್‌ನ ಪರಮೋಚ್ಛ ನಾಯಕ ಅಯತ್ ಉಲ್ಲಾ ಅಲಿ ಖಮೇನಿ ಹೇಳಿದ್ದಾರೆ.
'ಸಿರಿಯಾದಲ್ಲಿ ಏನು ಆಗಿದೆಯೋ ಅದು ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ಯೋಜನೆಯ ಭಾಗ ಎಂಬುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ನಮ್ಮ ಬಳಿ ಅದಕ್ಕೆ ಸಾಕ್ಷಿಗಳಿವೆ. ಈ ಸಾಕ್ಷಿಗಳು ನಮ್ಮ ಸಂಶಯವನ್ನು ದೂರಾಗಿಸಿವೆ’ಎಂದು ಖಮೇನಿ ಹೇಳಿರುವುದಾಗಿ ಸರ್ಕಾರಿ ಮಾಧ್ಯಮವೊಂದು ವರದಿ ಮಾಡಿದೆ.
ಹೌದು, ಸಿರಿಯಾದ ನೆರೆಯ ದೇಶವು ಈ ವಿಷಯದಲ್ಲಿ ಸ್ಪಷ್ಟವಾದ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ಇಸ್ರೇಲ್ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು. ಪ್ರತಿಯೊಬ್ಬರೂ ಇದನ್ನು ನೋಡುತ್ತಿದ್ದಾರೆ. ಎಲ್ಲರಿಗೂ ಇದು ತಿಳಿದಿದೆ. ಆದರೆ, ಪ್ರಮುಖ ಸಂಚುಕೋರ, ಮಾಸ್ಟರ್‌ಮೈಂಡ್ ಮತ್ತು ಕಮಾಂಡ್ ಸೆಂಟರ್ ಅಮೆರಿಕ ಎಂದು ಅವರು ಹೇಳಿದ್ದಾರೆ.
ಸಿರಿಯಾ ಅಧ್ಯಕ್ಷರಾಗಿದ್ದ ಬಶರ್ ಅಸಾದ್ ಬಂಡುಕೋರರ ದಾಳಿಗೆ ಹೆದರಿ ಇತ್ತೀಚೆಗೆ ಪದವಿ ತೊರೆದು ದೇಶ ಬಿಟ್ಟು ಪರಾರಿಯಾಗಿದ್ದರು.
ಬಶರ್ ಪಲಾಯನ ಮಾಡುತ್ತಿದ್ದಂತೆ ಪ್ರತಿಭಟನಕಾರರು ಭಾನುವಾರ ಮುಂಜಾನೆ ಮಿಂಚಿನ ಕಾರ್ಯಾಚರಣೆ ನಡೆಸಿದರು. ಆಡಳಿತದ ಮೇಲೆ ಹಿಡಿತ ಸಾಧಿಸಿದ್ದರು. ಅಲ್ಲದೆ, ಎಲ್ಲ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಈ ಬೆಳವಣಿಗೆಯು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಕಂಪನ ಸೃಷ್ಟಿಸಿದೆ. ಈ ಪ್ರದೇಶದಲ್ಲಿ ರಷ್ಯಾ ಮತ್ತು ಇರಾನ್ ಹೊಂದಿದ್ದ ಪ್ರಭಾವಕ್ಕೆ ಭಾರಿ ಏಟು ಬಿದ್ದಂತಾಗಿದೆ. ಸಂಘರ್ಷದ ಉದ್ದಕ್ಕೂ ಬಶರ್‌ಗೆ ಈ ಎರಡೂ ದೇಶಗಳು ಬೆಂಬಲ ನೀಡಿದ್ದವು. ಆದರೆ, ಈಗ ತಮ್ಮ ದೇಶವೇ ಎದುರಿಸುತ್ತಿರುವ ಬಿಕ್ಕಟ್ಟಿನಿಂದಾಗಿ ದೂರ ಇದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.