ADVERTISEMENT

ಪಾಕ್‌ ಅರೆಸೇನಾ ಪಡೆ ಕಚೇರಿ ಮೇಲೆ ಮಹಿಳಾ ಆತ್ಮಾಹುತಿ ಬಾಂಬರ್‌ ದಾಳಿ

ಪಿಟಿಐ
Published 2 ಡಿಸೆಂಬರ್ 2025, 13:55 IST
Last Updated 2 ಡಿಸೆಂಬರ್ 2025, 13:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕರಾಚಿ: ನಿಷೇಧಿತ ಬಲೂಚಿಸ್ತಾನ ಲಿಬರೇಷನ್‌ ಆರ್ಮಿಗೆ (ಬಿಎಲ್‌ಎ) ಸೇರಿದ ಮಹಿಳಾ ಆತ್ಮಾಹುತಿ ಬಾಂಬರ್‌ವೊಬ್ಬರು ಪಾಕಿಸ್ತಾನದ ಅರೆಸೇನಾ ಪಡೆ ಕಚೇರಿಯ ಪ್ರವೇಶ ದ್ವಾರದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾರೆ. ಈ ವೇಳೆ ನಡೆದ ಸುದೀರ್ಘ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಭಯೋತ್ಪಾದಕರು ಮೃತಪಟ್ಟಿದ್ದಾರೆ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಛಾಗೈ ಜಿಲ್ಲೆಯ ನೊಕುಂದಿ ಪಟ್ಟಣದಲ್ಲಿರುವ ಫ್ರಂಟಿಯರ್‌ ಕಾರ್ಪ್ಸ್‌ನ ಪ್ರವೇಶದ್ವಾರದಲ್ಲಿ ಬಾಂಬರ್‌ ಭಾನುವಾರ ತಡರಾತ್ರಿ ತನ್ನನ್ನು ತಾನು ಸ್ಫೋಟಿಸಿಕೊಂಡರು. ಇದಾದ ಬಳಿಕ ಆರು ಮಂದಿ ಬಿಎಲ್‌ಎ ಭಯೋತ್ಪಾದಕರು ಒಳನುಗ್ಗಲು ಯತ್ನಿಸಿದರು. ಈ ವೇಳೆ ಮೂವರನ್ನು ಸ್ಥಳದಲ್ಲೇ ಹತ್ಯೆ ಮಾಡಲಾಯಿತು. ಮತ್ತೆ ಮೂವರು ಆವರಣ ಗೋಡೆ ಹಾರಿ ಪರಾರಿಯಾಗಲು ಯತ್ನಿಸಿದರು. ಈ ವೇಳೆ ಅವರನ್ನು ಸುತ್ತುವರಿದು ಹತ್ಯೆ ಮಾಡಲಾಗಿದೆ’ ಎಂದು ಪಾಕಿಸ್ತಾನ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಬರ್‌ ಅನ್ನು ಝಿನಾತ ರಫೀಕ್‌ ಎಂದು ಬಿಎಲ್‌ಎ ಸಂಘಟನೆಯು ಗುರುತಿಸಿದೆ. ಸೋಮವಾರ ರಾತ್ರಿಯವರೆಗೂ ಗುಂಡಿನ ದಾಳಿ ಮುಂದುವರಿದಿತ್ತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ADVERTISEMENT

ಕಳೆದ ಕೆಲವು ತಿಂಗಳಲ್ಲಿ ಪಾಕಿಸ್ತಾನದ ಸೇನೆಯನ್ನು ಗುರಿಯಾಗಿರಿಸಿ ಬಿಎಲ್‌ಎ ಮೂರನೇ ಬಾರಿ ದಾಳಿ ನಡೆಸಿದಂತಾಗಿದೆ.