ADVERTISEMENT

ಭಾರತದ ವಿರುದ್ಧ ಗೆಲುವು: ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ

ಪಿಟಿಐ
Published 25 ಅಕ್ಟೋಬರ್ 2021, 6:02 IST
Last Updated 25 ಅಕ್ಟೋಬರ್ 2021, 6:02 IST
ಕರಾಚಿಯಲ್ಲಿ ಭಾರತ–ಪಾಕ್‌ ಕ್ರಿಕೆಟ್ ಪಂದ್ಯ ವೀಕ್ಷಿಸಲು ಸೇರಿದ್ದ ಕ್ರಿಕೆಟ್ ಅಭಿಮಾನಿಗಳು  –ರಾಯಿಟರ್ಸ್‌ ಚಿತ್ರ
ಕರಾಚಿಯಲ್ಲಿ ಭಾರತ–ಪಾಕ್‌ ಕ್ರಿಕೆಟ್ ಪಂದ್ಯ ವೀಕ್ಷಿಸಲು ಸೇರಿದ್ದ ಕ್ರಿಕೆಟ್ ಅಭಿಮಾನಿಗಳು  –ರಾಯಿಟರ್ಸ್‌ ಚಿತ್ರ   

ಕರಾಚಿ: ಟ್ವೆಂಟಿ 20 ವಿಶ್ವಕಪ್‌ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಭಾನುವಾರ ಗೆಲುವು ಸಾಧಿಸಿರುವುದಕ್ಕೆ ಪಾಕಿಸ್ತಾನದಾದ್ಯಂತ ಸಂಭ್ರಮ ಮನೆಮಾಡಿದೆ.

ವಿಶ್ವಕಪ್‌ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಆಡಿದ್ದ 12 ಪಂದ್ಯಗಳನ್ನು ಸೋತಿತ್ತು. ಇದೇ ಪ್ರಥಮ ಬಾರಿಗೆ ಭಾರತದ ವಿರುದ್ಧ 10 ವಿಕೆಟ್‌ಗಳ ಅಮೋಘ ಜಯ ಸಾಧಿಸಿದ್ದಕ್ಕಾಗಿ ಪಾಕಿಸ್ತಾನದಲ್ಲಿ ಸಂಭ್ರಮ ಇನ್ನಷ್ಟು ಜೋರಾಗಿತ್ತು.

ಕರಾಚಿಯಲ್ಲಿ ವಾಹನಗಳ ಹಾರ್ನ್‌ಗಳನ್ನು ಜೋರಾಗಿ ಮೊಳಗಿಸುತ್ತ ರಸ್ತೆಗಳಲ್ಲಿ ಸಂಚರಿಸಿದ ಅಭಿಮಾನಿಗಳು, ಕೆಲವೆಡೆ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಇಡೀ ಪಾಕಿಸ್ತಾನ ತಂಡಕ್ಕೆ ಅದರಲ್ಲೂ ಮುಖ್ಯವಾಗಿ ಆರಂಭಿಕನಾಗಿ ಅಜೇಯ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಬಾಬರ್‌ ಅಜಂ ಅವರಿಗೆ ಹಾಗೂ ರಿಜ್ವಾನ್‌ ಮತ್ತು ಶಾಹೀನ್‌ ಅಫ್ರಿದ್‌ ಅವರಿಗೆ ಅಭಿನಂದನೆಗಳು, ನಿಮ್ಮೆಲ್ಲರ ಬಗ್ಗೆ ದೇಶ ಹೆಮ್ಮೆ ಪಡುತ್ತದೆ’ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಟ್ವೀಟ್ ಮಾಡಿದ್ದಾರೆ.‌

ಇದು ಪಾಕಿಸ್ತಾನೀಯರಿಗೆ ಅತ್ಯಂತ ಹೆಮ್ಮೆಯ ಕ್ಷಣ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್‌ ರಾಜಾ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ಸೇನಾಪಡೆ ಮುಖ್ಯಸ್ಥರೂ ತಂಡವನ್ನು ಅಭಿನಂದಿಸಿದ್ದಾರೆ.

ಮೊದಲು ನಿರ್ಜನ, ಬಳಿಕ ಜನಸಾಗರ: ಭಾನುವಾರ ಸಂಜೆ ಪಂದ್ಯ ಆರಂಭವಾಗುವ ವೇಳೆಗೆ ಕರಾಚಿಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೆ ಪಂದ್ಯ ಕೊನೆಯ ಹಂತಕ್ಕೆ ಬಂದಂತೆ ಜನಸಾಗರವೇ ರಸ್ತೆಗಳಿಗೆ ಹರಿದುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.