ADVERTISEMENT

ಐವರು ಐಸಿಸ್‌ ಶಂಕಿತ ಉಗ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 15:25 IST
Last Updated 6 ಏಪ್ರಿಲ್ 2021, 15:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾಹೋರ್ (ಪಿಟಿಐ): ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿದ ಐವರು ಶಂಕಿತ ಭಯೋತ್ಪಾದಕರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಸೀದಿಯಿಂದ ಬಂಧಿಸಲಾಗಿದೆ.

ಇವರು ದ್ವೇಷಬಿತ್ತುವ ಸಾಮಗ್ರಿಗಳನ್ನು ವಿತರಿಸುತ್ತಿದ್ದರು ಮತ್ತು ಜನರಿಂದ ಭಯೋತ್ಪಾದನಾ ಚಟುವಟಿಕೆಗೆ ಹಣ ಸಂಗ್ರಹಿಸುತ್ತಿದ್ದರು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಲಾಹೋರ್‌ನ ರಕ್ಷಣಾ ವಸತಿ ಪ್ರಾಧಿಕಾರದ (ಡಿಎಚ್‌ಎ) ಭಟ್ಟ ಚೌಕ್ ಬಳಿ ‘ದಾಹೆಶ್’ (ಐಸಿಸ್) ಸದಸ್ಯರು ಇರುವ ಬಗ್ಗೆ ಪಂಜಾಬ್‌ ಪೊಲೀಸ್‌ ಭಯೋತ್ಪಾದನಾ ನಿಗ್ರಹ ಇಲಾಖೆಗೆ (ಸಿಟಿಡಿ) ವಿಶ್ವಾಸಾರ್ಹ ಮಾಹಿತಿ ದೊರೆತಿತ್ತು. ಬಂಧಿತ ಭಯೋತ್ಪಾದಕರನ್ನು ನಜೀಫ್ ಉಲ್ಲಾ, ಜಿಯಾ ಉರ್ ರೆಹಮಾನ್, ಮುಹಮ್ಮದ್ ಇಶ್ತಿಯಾಕ್, ಅಬ್ದುಲ್ ರೆಹಮಾನ್ ಬಟ್ ಮತ್ತು ಮಲಿಕ್ ಕಾಶಿಫ್ ಎಂದು ಗುರುತಿಸಲಾಗಿದೆ ಎಂದು ಸಿಟಿಡಿ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಮುದ್ರಿತ ದಾಹೆಶ್ ಮೊನೊಗ್ರಾಮ್ ಮತ್ತು ದ್ವೇಷ ಹರಡುವ ಪ್ರಚಾರ ಸಾಮಗ್ರಿ, ರಶೀದಿ ಪುಸ್ತಕ, 12 ಸಾವಿರ ಪಾಕಿಸ್ತಾನಿ ರೂಪಾಯಿ ಹಾಗೂ ಒಸಾಮಾ ಬಿನ್ ಲಾಡೆನ್ ಕುರಿತ ಪುಸ್ತಕದ 15 ಪ್ರತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದನಾ ನಿಗ್ರಹ ಇಲಾಖೆಯ ಲಾಹೋರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಟಿಡಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.