ADVERTISEMENT

ದಕ್ಷಿಣ ಆಫ್ರಿಕಾ: ಭಾರಿ ಪ್ರವಾಹಕ್ಕೆ ಕೊಚ್ಚಿಹೋದ ದೇವಸ್ಥಾನ, ಕನಿಷ್ಠ 45 ಸಾವು

ಪಿಟಿಐ
Published 13 ಏಪ್ರಿಲ್ 2022, 2:23 IST
Last Updated 13 ಏಪ್ರಿಲ್ 2022, 2:23 IST
ಡರ್ಬನ್‌ ನಗರದದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಹೆದ್ದಾರಿ, ಕಟ್ಟಡಗಳು ಕೊಚ್ಚಿ ಹೋಗಿರುವ ದೃಶ್ಯ (ಟ್ವಿಟರ್‌ ಚಿತ್ರ)
ಡರ್ಬನ್‌ ನಗರದದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಹೆದ್ದಾರಿ, ಕಟ್ಟಡಗಳು ಕೊಚ್ಚಿ ಹೋಗಿರುವ ದೃಶ್ಯ (ಟ್ವಿಟರ್‌ ಚಿತ್ರ)   

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಡರ್ಬನ್‌ ನಗರದ ಚಾಟ್ಸ್‌ವರ್ತ್‌ನಲ್ಲಿದ್ದ 70 ವರ್ಷ ಹಳೆಯ ಹಿಂದೂ ದೇವಸ್ಥಾನ ಸೇರಿದಂತೆ ಹಲವಾರು ಕಟ್ಟಡಗಳು ಭಾರಿ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿ ಸಂಪೂರ್ಣ ನಾಶವಾಗಿವೆ.

ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಬೆಳಿಗ್ಗೆ ಭಾರಿ ಪ್ರವಾಹ ಸಂಭವಿಸಿದೆ. ಕನಿಷ್ಠ 45 ಮಂದಿ ಪ್ರಾಣ ಕಳೆದುಕೊಂಡಿದ್ದು, ನೂರಾರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆದ್ದಾರಿಗಳು, ನಗರ ರಸ್ತೆಗಳು, ಹಲವು ಕಾರುಗಳು ಕೊಚ್ಚಿಹೋಗಿವೆ.

ಚಂಡಮಾರುತದ ಅಬ್ಬರವಿನ್ನೂ ತಗ್ಗಿಲ್ಲ. ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಡರ್ಬನ್‌ನ ಪರಿಸ್ಥಿತಿ ಇನ್ನೂ ಹದಗೆಡಬಹುದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ADVERTISEMENT

ಭಕ್ತರು ಭೀತಿಯಿಂದ ನೋಡುನೋಡುತ್ತಿದ್ದಂತೆ ಅಮ್ಲಟುಜಾನಾ ನದಿಯ ದಡದಲ್ಲಿದ್ದ ದೇವಸ್ಥಾನವು ಸಂಪೂರ್ಣವಾಗಿ ಕುಸಿದು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ನಾಲ್ಕು ವರ್ಷಗಳ ಹಿಂದೆ ಭಾರಿ ಮಳೆ ಮತ್ತು ಪ್ರವಾಹದಿಂದ ದೇವಸ್ಥಾನಕ್ಕೆ ಹಾನಿಯಾಗಿತ್ತು.

'ವಿಷ್ಣು ದೇವಸ್ಥಾನದ ದೇವರ ವಿಗ್ರಹಗಳು ಹಾಗೆಯೇ ಉಳಿದಿವೆ. ಆದರೆ ದೇಗುಲವು ಸಂಪೂರ್ಣವಾಗಿ ನಾಶವಾಗಿದೆ. ವಿಗ್ರಹಗಳು ಗಟ್ಟಿಯಾದ ಗ್ರಾನೈಟ್‌ನಿಂದ ಮಾಡಿದ್ದಾಗಿದೆ. ದೇಗುಲದ ಅಡಿಪಾಯದೊಂದಿಗೆ ವಿಗ್ರಹಗಳನ್ನು ಸ್ಥಾಪಿಸಿರುವುದರಿಂದ ಉಳಿದುಕೊಂಡಿವೆ. ಇಲ್ಲಿಗೆ ನಿತ್ಯವೂ ಭಕ್ತರು ಭೇಟಿ ನೀಡುತ್ತಿದ್ದರು' ಎಂದು ದೇವಸ್ಥಾನದ ಸಮಿತಿಯ ಸಹಾಯಕ ಕಾರ್ಯದರ್ಶಿ ಕುರೇಶಾ ಮೂಡಲೀ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.