ಕಠ್ಮಂಡು: ನೇಪಾಳದ ಮಾಜಿ ಸ್ಪೀಕರ್ ಕೃಷ್ಣ ಬಹದ್ದೂರ್ ಮಹಾರಾ ಅವರನ್ನು ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಭಾನುವಾರ ಬಂಧಿಸಲಾಗಿದೆ.
‘ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳದ ಉಪಾಧ್ಯಕ್ಷರೂ ಆಗಿರುವ ಮಹಾರಾ(67) ಅವರನ್ನು ಲಲಿತ್‌ಪುರದಲ್ಲಿನ ಅವರ ನಿವಾಸದಲ್ಲಿ ಸೆಂಟ್ರಲ್ ಇನ್‌ವೆಸ್ಟಿಗೇಷನ್ ಬ್ಯೂರೊ(ಸಿಐಬಿ) ಬಂಧಿಸಿದೆ’ ಎಂದು ನೇಪಾಳ ಪೊಲೀಸರ ಪ್ರಕಟಣೆ ತಿಳಿಸಿದೆ.
ಮೂರು ವರ್ಷಗಳ ಹಿಂದೆ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದ್ದ ₹5.36 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್ತುಗಳ ಮಾರಾಟದಲ್ಲಿ ಭಾಗಿಯಾಗಿರುವ ಆರೋಪ ಮಹಾರಾ ಅವರ ಮೇಲಿದೆ.
ಎಲೆಕ್ಟ್ರಾನಿಕ್ ಸಿಗರೇಟ್‌ಗಳ ಒಳಗೆ ಚಿನ್ನದ ತುಂಡುಗಳನ್ನು ಇಟ್ಟು ಸಾಗಿಸುತ್ತಿದ್ದ ಚೀನಾದ ಪ್ರಜೆಯೊಬ್ಬನನ್ನು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಮೂರು ವರ್ಷಗಳ ಹಿಂದೆ ಬಂಧಿಸಲಾಗಿತ್ತು. ಈ ಚಿನ್ನದ ತುಂಡುಗಳನ್ನು ಮಾರಾಟ ಮಾಡಲು, ಕೆಲ ಗ್ಯಾಂಗ್‌ಗಳಿಗೆ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಗೆ ಮಹಾರಾ ಸಲಹೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.