ADVERTISEMENT

ವರ್ಗೀಕೃತ ದಾಖಲೆಗಳ ಪ್ರಕರಣ: ಟ್ರಂಪ್ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ

ಪಿಟಿಐ
Published 9 ಜೂನ್ 2023, 3:15 IST
Last Updated 9 ಜೂನ್ 2023, 3:15 IST
Trump indicted in classified documents case
Trump indicted in classified documents case   

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಫೆಡರಲ್ ಕ್ರಿಮಿನಲ್ ಆರೋಪಗಳನ್ನು ಹೊರಿಸಿರುವ ನ್ಯಾಯಾಂಗ ಇಲಾಖೆಯು ಕಾನೂನುಬದ್ಧವಾಗಿ ಮತ್ತು ರಾಜಕೀಯವಾಗಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಅಧಿಕಾರ ಕಳೆದುಕೊಂಡ ಬಳಿಕ ತಮ್ಮೊಂದಿಗೆ ತೆಗೆದುಕೊಂಡು ಹೋದ ವರ್ಗೀಕೃತ ದಾಖಲೆಗಳ ನಿರ್ವಹಣೆ ಮತ್ತು ಅವುಗಳನ್ನು ಹಿಂಪಡೆಯಲು ಸರ್ಕಾರದ ಪ್ರಯತ್ನಗಳಿಗೆ ಅಡ್ಡಿಪಡಿಸಿದ್ದಾರೆಯೇ ಎಂಬ ಕುರಿತು ನಡೆದ ಸುದೀರ್ಘ ತನಿಖೆಯ ಆಧಾರದ ಮೇಲೆ ಆರೋಪಪಟ್ಟಿ ಸಲ್ಲಿಸಲಾಗಿದೆ.

ವಿಶೇಷ ಅಭಿಯೋಜಕ ಜಾಕ್ ಸ್ಮಿತ್ ಅವರ ಕಚೇರಿಯಿಂದ ಮಿಯಾಮಿ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಲಾಗಿದ್ದು, ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾಜಿ ಅಧ್ಯಕ್ಷರೊಬ್ಬರು ಫೆಡರಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.

ADVERTISEMENT

ಟ್ರಂಪ್‌ ಮಾಜಿ ಅಧ್ಯಕ್ಷರಷ್ಟೇ ಅಲ್ಲ. 2024ರ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಗಾದಿಗೆ ಸ್ಪರ್ಧೆ ಮಾಡುವ ಮೂಲಕ ಅಧ್ಯಕ್ಷ ಜೋ ಬೈಡನ್ ಅವರನ್ನು ಎದುರಿಸಲು ಮುಂಚೂಣಿಯಲ್ಲಿರುವವರಾಗಿದ್ದಾರೆ,

ಗೂಢಚರ್ಯೆ ಕಾಯಿದೆಯನ್ನು ಉಲ್ಲಂಘಿಸಿ ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ರಕ್ಷಣಾ ರಹಸ್ಯ ದಾಖಲೆಗಳನ್ನು ಉಳಿಸಿಕೊಂಡಿರುವುದು, ಸುಳ್ಳು ಹೇಳಿಕೆಗಳನ್ನು ನೀಡುವುದು ಸೇರಿದಂತೆ ಒಟ್ಟು ಏಳು ಆರೋಪಗಳನ್ನು ಟ್ರಂಪ್ ವಿರುದ್ಧ ಹೊರಿಸಲಾಗಿದೆ.

ತಮ್ಮ ನಡುವಿನ ಸಂಬಂಧ ಬಹಿರಂಗಪಡಿಸದಂತೆ 2016ಕ್ಕೂ ಮುನ್ನ ಪೋರ್ನ್ ಸ್ಟಾರ್‌ಗೆ ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ 30ಕ್ಕೂ ಹೆಚ್ಚು ಅಪರಾಧ ಆರೋಪಗಳನ್ನು ದಾಖಲಿಸಿದ ಎರಡು ತಿಂಗಳ ನಂತರ ಮತ್ತೊಂದು ಆರೋಪ ಹೊರಿಸಲಾಗಿದೆ.

ಮಾಜಿ ಅಧ್ಯಕ್ಷರು ತಮ್ಮೊಂದಿಗೆ ಶ್ವೇತಭವನದಿಂದ ತೆಗೆದುಕೊಂಡು ಹೋಗಿ ಫ್ಲಾರಿಡಾದ ಅವರ ಖಾಸಗಿ ಕ್ಲಬ್ ಮತ್ತು ನಿವಾಸದಲ್ಲಿ ಇಟ್ಟಿದ್ದ ನೂರಾರು ಸೂಕ್ಷ್ಮ ಸರ್ಕಾರಿ ದಾಖಲೆಗಳನ್ನು ಹಿಂಪಡೆಯಲು ನ್ಯಾಷನಲ್ ಆರ್ಕೈವ್ಸ್ ಮತ್ತು ರೆಕಾರ್ಡ್ಸ್ ಅಡ್ಮಿನಿಸ್ಟ್ರೇಷನ್ ಹಾಗೂ ನ್ಯಾಯಾಂಗ ಇಲಾಖೆಯು ಪದೇ ಪದೇ ಪ್ರಯತ್ನಿಸಿದ ಕುರಿತಂತೆಯೂ ದೋಷಾರೋಪದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.