ADVERTISEMENT

ಸುಡಾನ್ ನಾಗರಿಕ ಸಂಘರ್ಷ: 43 ಜನರ ಹತ್ಯೆ, 46 ಹಳ್ಳಿಗಳು ದಹನ

ಐಎಎನ್ಎಸ್
Published 26 ನವೆಂಬರ್ 2021, 10:14 IST
Last Updated 26 ನವೆಂಬರ್ 2021, 10:14 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಖರ್ಟೌಮ್: ಸುಡಾನ್‌ನ ವೆಸ್ಟ್ ದರ್ಫುರ್ ಪ್ರದೇಶದಜೆಬೆಲ್ ಮೂನ್ ಎಂಬ ಪ್ರದೇಶದಲ್ಲಿ ಅರಬ್ ಅಲೆಮಾರಿಗಳು ಮತ್ತು ಮಿಸ್ಸೆರಿಯಾ ಜೆಬೆಲ್ ರೈತರ ನಡುವೆ ನಡೆದ ಸಂಘರ್ಷದಲ್ಲಿ 43 ಮಂದಿ ಕೊಲೆಯಾಗಿದ್ದು, 46 ಹಳ್ಳಿಗಳನ್ನು ಸುಟ್ಟು ಲೂಟಿ ಮಾಡಲಾಗಿದೆ ಎಂದು ಸುಡಾನ್‌ನಲ್ಲಿರುವ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ(ಒಸಿಎಚ್‌ಎ) ಹೇಳಿದೆ.

ಒಸಿಎಚ್‌ಎ ಪ್ರಕಾರ, ನವೆಂಬರ್ 17ರಿಂದಲೇ ಸಂಘರ್ಷ ಭುಗಿಲೆದ್ದಿದೆ.

‘ಪ್ರಾಥಮಿಕ ವರದಿಗಳ ಪ್ರಕಾರ, 43 ಜನರನ್ನು ಕೊಲ್ಲಲಾಗಿದ್ದು, 46 ಹಳ್ಳಿಗಳನ್ನು ಸುಡಲಾಗಿದೆ. ಬಹಳಷ್ಟು ಮಂದಿ ಗಾಯಗೊಂಡಿದ್ದಾರೆ’ ಎಂದು ವರದಿ ತಿಳಿಸಿದೆ.

ADVERTISEMENT

‘ಮಕ್ಕಳು ಸೇರಿದಂತೆ ಬಹಳಷ್ಟು ಜನರು ನಾಪತ್ತೆಯಾಗಿದ್ದಾರೆ’ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಡಾನ್‌ನ ಮಾಜಿ ಅಧ್ಯಕ್ಷ ಓಮರ್ ಅಲ್ ಬಶೀರ್ ಅವರ ಕಾಲಾವಧಿ 2003ರಿಂದಲೂ ಈ ನಾಗರಿಕ ಸಂಘರ್ಷ ನಡೆಯುತ್ತಿದೆ. ಏಪ್ರಿಲ್ 11,2019ರಂದು ಅವರು ಅಧಿಕಾರದಿಂದ ಕೆಳಗಿಳಿದರು.

ಅಕ್ಟೋಬರ್ 3, 2020ರಲ್ಲಿ ದರ್ಫುರ್ ಪ್ರದೇಶದ ಸ್ಥಳಿಯರ ಜೊತೆ ಒಪ್ಪಂದ ಮಾಡಿಸುವ ಮೂಲಕ ಹೊಸ ಸರ್ಕಾರವು ಸಂಘರ್ಷವನ್ನು ಕೊನೆಗೊಳಿಸುವ ಯತ್ನ ನಡೆಸಿತ್ತು. ಆದರೆ, ಇನ್ನೂ ಕೆಲ ಸಂಘಟನೆಗಳು ಒಪ್ಪಂದಕ್ಕೆ ಸಹಿಹಾಕಿಲ್ಲ.‌

ಜೆಬೆಲ್ ಮೂನ್ ಪ್ರದೇಶದಲ್ಲಿ ಸುಮಾರು 66,500 ಮಂದಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, 43,000ಕ್ಕೂ ಅಧಿಕ ಜನರಿಗೆ ಮಾನವೀಯ ನೆಲೆಯಲ್ಲಿ ನೆರವಿನ ಅಗತ್ಯವಿದೆ ಎಂದು 2021ರ ವರದಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.