ADVERTISEMENT

ಅಮೆರಿಕದಲ್ಲಿ ಸಂಶೋಧನೆ: ಮೂವರು ಚೀನಿಯರ ಬಂಧನ, ಒಬ್ಬ ನಾಪತ್ತೆ

ಪಿಟಿಐ
Published 24 ಜುಲೈ 2020, 8:26 IST
Last Updated 24 ಜುಲೈ 2020, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಚೀನಾ ಸೇನೆಯ ಸದಸ್ಯರು ಎಂಬುದನ್ನು ಮರೆಮಾಚಿ ಅಮೆರಿಕದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ನಾಲ್ವರು ಚೀನಿ ನಾಗರಿಕರ ವಿರುದ್ಧ ವೀಸಾ ವಂಚನೆ ಆರೋಪದಡಿ ಸ್ಥಳೀಯ ಅಧಿಕಾರಿಗಳು ಮೊಕದ್ದಮೆ ದಾಖಲಿಸಿದ್ದಾರೆ.

ಈ ಪೈಕಿ ಮೂವರನ್ನು ಎಫ್‍ಬಿಐ ಬಂಧಿಸಿದ್ದು, ಇನ್ನೊಬ್ಬರು ತಲೆಮರೆಸಿಕೊಂಡಿದ್ದಾರೆ. ಸ್ಯಾನ್‍ಫ್ರಾನ್ಸಿಸ್ಕೊದಲ್ಲಿರುವ ಚೀನಾದ ಕಾನ್ಸುಲೇಟ್‍ ಕಚೇರಿಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದರು ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ನಾಲ್ವರ ವಿರುದ್ಧವೂ ವೀಸಾ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದಲ್ಲಿ ಗರಿಷ್ಠ 10 ವರ್ಷ ಸಜೆ ಮತ್ತು 2.5 ಲಕ್ಷ ಡಾಲರ್ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ADVERTISEMENT

ಎಫ್‍ಬಿಐ ಇತ್ತೀಚಿಗೆ ಅಮೆರಿಕದ 25ಕ್ಕೂ ಹೆಚ್ಚು ನಗರಗಳಲ್ಲಿ ವೀಸಾ ಹೊಂದಿದ್ದ ಶಂಕಿತರ ಸಂದರ್ಶನ ನಡೆಸಿತ್ತು. ಈ ಸದಸ್ಯರು ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಸದಸ್ಯರು. ಇವರು ಸಂಶೋಧನಾ ವೀಸಾಗೆ ಅರ್ಜಿ ಸಲ್ಲಿಸಿದ್ದು, ಪಿಎಲ್‍ಎ ಜೊತೆಗಿನ ಸಂಪರ್ಕವನ್ನು ಮರೆಮಾಚಿದ್ದರು ಎಂದು ರಾಷ್ಟ್ರೀಯ ಭದ್ರತೆಯ ಅಸಿಸ್ಟೆಂಟ್‍ ಅಟಾರ್ನಿ ಜನರಲ್‍ ಜಾನ್‍ ಸಿ.ಡೆಮೆರ್ಸ್ ಅವರು ತಿಳಿಸಿದ್ದಾರೆ.

ಅಮೆರಿಕದ ಮುಕ್ತ ಸಮಾಜದ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಚೀನಾದ ಕಮ್ಯುನಿಸ್ಟ್ ಪಕ್ಷದ ಇನ್ನೊಂದು ಮುಖ. ಎಫ್‍ಬಿಐ ಜೊತೆಗೂಡಿ ನಾವು ಇಂಥ ತನಿಖೆಗಳನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.