ADVERTISEMENT

ಫ್ರಾನ್ಸ್ ನೂತನ ಪ್ರಧಾನಿಯಾಗಿ ಜೀನ್ ಕ್ಯಾಸ್ಟೆಕ್ಸ್ ಆಯ್ಕೆ

ಏಜೆನ್ಸೀಸ್
Published 3 ಜುಲೈ 2020, 14:07 IST
Last Updated 3 ಜುಲೈ 2020, 14:07 IST
ಕ್ರಮವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೊನ್, ನಿಯೋಜಿತ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್, ನಿರ್ಗಮಿತ ಪ್ರಧಾನಿ ಎಡ್ವರ್ಡ್ ಫಿಲಿಪ್
ಕ್ರಮವಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರೊನ್, ನಿಯೋಜಿತ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್, ನಿರ್ಗಮಿತ ಪ್ರಧಾನಿ ಎಡ್ವರ್ಡ್ ಫಿಲಿಪ್   

ಪ್ಯಾರಿಸ್ : ಫ್ರಾನ್ಸ್‌ನ ನೂತನ ಪ್ರಧಾನ ಮಂತ್ರಿಯಾಗಿ ಲಾಕ್‌ಡೌನ್ ತಜ್ಞ ಜೀನ್ ಕ್ಯಾಸ್ಟೆಕ್ಸ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೊನ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಮುಂದಿನ ಬದಲಾವಣೆಯವರೆಗೆ ಜೀನ್ ಕ್ಯಾಸ್ಟೆಕ್ಸ್ ಸರ್ಕಾರ ರಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಎಡ್ವರ್ಡ್ ಫಿಲಿಫ್ ರಾಜೀನಾಮೆ ನೀಡಿದ್ದರಿಂದ ತೆರವಾದ ಪ್ರಧಾನಿ ಸ್ಥಾನಕ್ಕೆ ಕ್ಯಾಸ್ಟೆಕ್ಸ್ ಅವರ ಹೆಸರನ್ನು ಪ್ರಕಟಿಸಿದ್ದಾರೆ. ಮಂತ್ರಿಯಾಗಿ ಸೇವೆ ಸಲ್ಲಿಸಿದ ಯಾವುದೇ ಅನುಭ ಇಲ್ಲದಿದ್ದರೂ ಕ್ಯಾಸ್ಟೆಕ್ಸ್ ಆಡಳಿತದಲ್ಲಿ ಅತ್ಯಂತ ಮಹತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕೋವಿಡ್ 19 ಸಮಯದಲ್ಲಿ ದೇಶದ ಅರ್ಥವ್ಯವಸ್ಥೆ ಕುಸಿತ, ಸಮಸ್ಯೆಗಳು ಹೆಚ್ಚಾಗಿರುವುದು ಎಡ್ವರ್ಡ್ ಫಿಲಿಪ್ ರಾಜೀನಾಮೆ ಸಲ್ಲಿಸಲು ಪ್ರಮುಖ ಕಾರಣ ಎನ್ನಲಾಗಿದೆ.

ಅಲ್ಲದೆ, ಅಧ್ಯಕ್ಷ ಮ್ಯಾಕ್ರನ್ ಗಿಂತಲೂ ಜನಪ್ರಿಯರಾಗಿದ್ದ ಎಡ್ವರ್ಡ್ ಫಿಲಿಪ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಮುನ್ಸಿಪಲ್ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿತ್ತು. ಇತ್ತೀಚೆಗೆ ಮ್ಯಾಕ್ರನ್ ಅವರು ಸ್ಥಳೀಯ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸದ್ಯದಲ್ಲಿಯೇ ಆಡಳಿತದಲ್ಲಿ ಬಹಳಷ್ಟು ಬದಲಾವಣೆ ತರಲಿದ್ದೇನೆ. ಆ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಪುನಶ್ಚೇತನ ಪಡೆದುಕೊಳ್ಳುವತ್ತ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದ್ದರು.

ADVERTISEMENT

ಅಧ್ಯಕ್ಷ ಮ್ಯಾಕ್ರೊನ್ ಹಾಗೂ ರಾಜಿನಾಮೆ ನೀಡಿದ ಪ್ರಧಾನಿ ಎಡ್ವರ್ಡ್ ಫಿಲಿಪ್ ಇಬ್ಬರೂ ಮೂರು ವರ್ಷಗಳ ಹಿಂದೆ ಒಂದೇ ಅವಧಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಮೂರು ವರ್ಷಕ್ಕೆ ದೇಶ ಹಿಂದೆಂದೂ ಕಾಣದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕಾರಣದಿಂದಾಗಿ ಅಧ್ಯಕ್ಷ ಮ್ಯಾಕ್ರೊನ್ ಆಡಳಿತದಲ್ಲಿ ಬದಲಾವಣೆ ತರಲು ಹೊರಟಿದ್ದಾರೆ. ಸದ್ಯದಲ್ಲಿಯೇ ಜೀನ್ ಕ್ಯಾಸ್ಟೆಕ್ಸ್ ತಮ್ಮ ಸಂಪುಟ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.