ADVERTISEMENT

ಮಾಲಿಯಲ್ಲಿ ಇಂಧನ ಬಿಕ್ಕಟ್ಟು: ಶಾಲೆ, ಕಾಲೇಜುಗಳು ಬಂದ್

ಏಜೆನ್ಸೀಸ್
Published 27 ಅಕ್ಟೋಬರ್ 2025, 13:53 IST
Last Updated 27 ಅಕ್ಟೋಬರ್ 2025, 13:53 IST
   

ಬಮಾಕೊ (ಮಾಲಿ): ಇಂಧನ ಆಮದಿನ ಮೇಲೆ ಜಿಹಾದಿ ಭಯೋತ್ಪಾದಕರು ಹೇರಿರುವ ನಿರ್ಬಂಧದಿಂದ ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಮುಂದಿನ ಎರಡು ವಾರಗಳವರೆಗೆ ದೇಶದಾದ್ಯಂತ ಎಲ್ಲಾ ಶಾಲೆ ಹಾಗೂ ವಿಶ್ವವಿದ್ಯಾಲಯಗಳನ್ನು  ಮುಚ್ಚುವುದಾಗಿ ಸರ್ಕಾರ ಘೋಷಿಸಿದೆ.

ಶಿಕ್ಷಣ ಸಚಿವ ಅಮಡೌ ಸೈ ಸವಾನೆ ಈ ಬಗ್ಗೆ ಮಾಹಿತಿ ನೀಡಿದ್ದು, ‘ಇಂಧನ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಶಾಲಾ–ಕಾಲೇಜುಗಳ ಸಿಬ್ಬಂದಿಯ ಸಂಚಾರಕ್ಕೂ ತೊಡಕಾಗುತ್ತಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಅಲ್ಲದೇ, ನವೆಂಬರ್‌ 10ರಂದು ಶಾಲೆಗಳನ್ನು ಮತ್ತೆ ತೆರೆಯಲಾಗುವುದು. ಅಷ್ಟರೊಳಗೆ ಸಹಜ ಸ್ಥಿತಿಯನ್ನು ಮರುಸ್ಥಾಪಿಸಲು ಆಡಳಿತ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದೂ ಹೇಳಿದ್ದಾರೆ. 

ADVERTISEMENT

ಅಲ್‌–ಖೈದಾ ಬೆಂಬಲಿತ ಜಮಾತ್‌ ನುಸೃತ್‌ ಅಲ್‌–ಇಸ್ಲಾಮ್‌ ವಾಲ್‌–ಮುಸ್ಲಿಮೀನ್‌ ಎಂಬ ಭಯೋತ್ಪಾದಕ ಸಂಘಟನೆಯು ಮಾಲಿಯ ಸುತ್ತ ಮುತ್ತಲಿನ ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳದಂತೆ ಸೆಪ್ಟೆಂಬರ್‌ನಲ್ಲಿ ನಿರ್ಬಂಧ ಹೇರಿದೆ.

ಇಂಧನ ಹೊತ್ತು ತರುವ ಟ್ಯಾಂಕರ್‌ಗಳನ್ನು ಗಡಿಯಲ್ಲೇ ತಡೆದು, ಅವುಗಳ ಮೇಲೆ ದಾಳಿ ನಡೆಸಿ, ಇಂಧನ ಪೂರೈಕೆಗೆ ಭಯೋತ್ಪಾದಕರು ತಡೆ ಒಡ್ಡಿದ್ದಾರೆ. ಇದು ಮಾಲಿಯಲ್ಲಿ ಆರ್ಥಿಕ, ಸಾಮಾಜಿಕ ಬಿಕ್ಕಟ್ಟಿಗೆ ಕಾರಣವಾಗಿದೆ. 

ಭಯೋತ್ಪಾದಕರಿಗೆ ಮೂಲಸೌಕರ್ಯ ಸಿಗುವುದನ್ನು ತಡೆಯುವ ನಿಟ್ಟಿನಲ್ಲಿ ದೂರದ ಸೂಕ್ಷ್ಮ ಪ್ರದೇಶಗಳಿಗೆ ಇಂಧನ ಪೂರೈಕೆ ನಿಲ್ಲಿಸುವುದಾಗಿ ಮಾಲಿಯ ಮಿಲಿಟರಿ ಆಡಳಿತ ಇತ್ತೀಚೆಗಷ್ಟೇ ಹೇಳಿತ್ತು.

ಹೀಗಾಗಿ ಮಿಲಿಟರಿ ಆಡಳಿತಕ್ಕೆ ತಿರುಗೇಟು ನೀಡಲು ಭಯೋತ್ಪಾದಕರು ಇಂಧನ ಪೂರೈಕೆಯ ಮಾರ್ಗಗಳಲ್ಲೇ ದಾಳಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.