ವಾಷಿಂಗ್ಟನ್: ಪೂರ್ತಿಯಾಗಿ ಲಸಿಕೆ ಹಾಕಿಸಿಕೊಂಡವರು ಒಳಾಂಗಣದಲ್ಲಿ ಮಾಸ್ಕ್ ಧರಿಸದೇ ಸಣ್ಣದಾಗಿ ಗುಂಪು ಸೇರಬಹುದು. ಆದರೆ ಅನಗತ್ಯ ಪ್ರಯಾಣ ಮತ್ತು ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಓಡಾಡಬಾರದು ಎಂದು ಅಮೆರಿಕದ ಜೋ ಬೈಡನ್ ಆಡಳಿತ ಹೇಳಿದೆ.
ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರವು (ಸಿಡಿಸಿ) ಕೊವಿಡ್ ಮಾರ್ಗಸೂಚಿಯಲ್ಲಿ ಪರಿಷ್ಕರಣೆ ಮಾಡಿದ್ದು, ಪೂರ್ತಿಯಾಗಿ ಲಸಿಕೆ ಹಾಕಿಸಿಕೊಂಡವರು ಪರಸ್ಪರ ಸಣ್ಣ ಗುಂಪು ಸೇರುವುದಕ್ಕೆ ಅನುಮತಿ ನೀಡಿದೆ.
ನಿರ್ಬಂಧವನ್ನು ತುಸುವೇ ಸಡಿಲಿಸಿರುವ ಆಡಳಿತವು, ಕೋವಿಡ್ ಪ್ರಕರಣಗಳು ಮತ್ತೊಮ್ಮೆ ಉಲ್ಬಣಗೊಳ್ಳುವುದನ್ನು ತಡೆಯಲು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.
ಪೂರ್ತಿಯಾಗಿ ಲಸಿಕೆ ಹಾಕಿಸಿಕೊಂಡವರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಬಾರದು. ಲಸಿಕೆ ಹಾಕಿಸಿಕೊಳ್ಳದವರ ಸಂಪರ್ಕಕ್ಕೆ ಬರುವಾಗ ಮಾಸ್ಕ್ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಈವರೆಗೆ ಲಸಿಕೆ ಪಡೆಯಲಾಗದವರನ್ನೂ ರಕ್ಷಿಸಬೇಕಾದದ್ದು ಅಗತ್ಯ. ದಿನವೊಂದಕ್ಕೆ ಸುಮಾರು 60,000ದಂತೆ ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದೂ ಸಿಡಿಸಿ ಹೇಳಿದೆ.
‘ನಾವಿನ್ನೂ ಗಂಭೀರ ಸಾಂಕ್ರಾಮಿಕದ ನಡುವೆಯೇ ಇದ್ದೇವೆ. ಶೇ 90ರಷ್ಟು ಜನತೆಗೆ ಇನ್ನೂ ಪೂರ್ತಿಯಾಗಿ ಲಸಿಕೆ ನೀಡಿಲ್ಲ. ಹೀಗಾಗಿ ಲಸಿಕೆ ಹಾಕಿಸಿಕೊಂಡಾಗಿದೆಯೋ ಇಲ್ಲವೋ ದೊಡ್ಡಮಟ್ಟದಲ್ಲಿ ಗುಂಪುಸೇರುವುದನ್ನು, ಮಾಸ್ಕ್ ಧರಿಸದೇ ಓಡಾಡುವುದನ್ನು ಮಾಡಬಾರದು’ ಎಂದು ಸಿಡಿಸಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.