ವಿಶ್ವ ಸಂಸ್ಥೆ: ‘ಗಾಜಾದಲ್ಲಿ ತಕ್ಷಣದಲ್ಲಿ ಕದನವಿರಾಮ ಘೋಷಿಸಬೇಕು ಮತ್ತು ಈ ಕದನವಿರಾಮವು ಶಾಶ್ವತವಾಗಿ ಇರಬೇಕು’ ಎಂಬ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ವಿರುದ್ಧವಾಗಿ ಅಮೆರಿಕವು ಮತ್ತೊಮ್ಮೆ ತನ್ನ ಪರಮಾಧಿಕಾರವನ್ನು ಗುರುವಾರ ಚಲಾಯಿಸಿತು.
ನಿರ್ಣಯದಲ್ಲಿ ಹಮಾಸ್ ಬಂಡುಕೋರರನ್ನು ಸೂಕ್ತ ರೀತಿಯಲ್ಲಿ ಖಂಡಿಸಲಾಗಿಲ್ಲ ಎಂಬುದು ಅಮೆರಿಕದ ಆಕ್ಷೇಪ. ಆದರೆ, ಮಂಡಳಿಯ ಉಳಿದೆಲ್ಲ ಪ್ರಮುಖ 14 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ‘ಗಾಜಾದಲ್ಲಿ ಮಾನವೀಯ ಪರಿಸ್ಥಿತಿಯು ದುರಂತಮಯವಾಗಿದೆ. ಮೂಲಭೂತ ಅಗತ್ಯಗಳನ್ನು ಪೂರೈಸಲು ವಿಧಿಸಿರುವ ಎಲ್ಲ ನಿರ್ಬಂಧವನ್ನು ಇಸ್ರೇಲ್ ತೆಗೆದುಹಾಕಬೇಕು’ ಎಂದು ಇವುಗಳು ಹೇಳಿವೆ.
‘ಹಮಾಸ್‌ನ ಕ್ರಿಯೆಗಳನ್ನು ಖಂಡಿಸಲಾಗಿಲ್ಲ ಅಥವಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಇಸ್ರೇಲ್‌ಗೆ ಹಕ್ಕಿದೆ ಎಂಬುದನ್ನೂ ಉಲ್ಲೇಖಿಸಲಾಗಿಲ್ಲ. ಹಮಾಸ್‌ಗೆ ಅನುಕೂಲವಾಗುವ ತಪ್ಪು ಸಂಕಥನಕ್ಕೆ ಈ ನಿರ್ಣಯವು ಅಂಕಿತ ಹಾಕಿದೆ. ಇದಕ್ಕೆ ಈ ಮಂಡಳಿಯ ಇತರ ಸದಸ್ಯರು ದನಿಗೂಡಿಸಿದ್ದಾರೆ’ ಎಂದು ಮತಚಾಯಿಸುವುದಕ್ಕೂ ಮುನ್ನ ಅಮೆರಿಕದ ನೀತಿ ಸಲಹೆಗಾರ ಮಾರ್ಗನ್ ಒರ್ಟಗಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.