ADVERTISEMENT

ಸೌದಿ: ಸರ್ವಪಕ್ಷ ನಿಯೋಗದ ಪ್ರವಾಸದ ಮಧ್ಯೆ ಗುಲಾಂ ನಬಿ ಆಜಾದ್ ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2025, 2:36 IST
Last Updated 28 ಮೇ 2025, 2:36 IST
   

ರಿಯಾದ್‌(ಸೌದಿ ಅರೇಬಿಯಾ): ಸರ್ವಪಕ್ಷ ನಿಯೋಗದಲ್ಲಿರುವ ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಂಗಳವಾರ ರಿಯಾದ್‌ನ ಆಸ್ಪತ್ರೆವೊಂದಕ್ಕೆ ದಾಖಲಾಗಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಬಿಜೆಪಿ ಸಂಸದ ಬೈಜಯಂತ್ ಜೈ ಪಾಂಡಾ, ‘ಸರ್ವಪಕ್ಷ ನಿಯೋಗದ ಪ್ರವಾಸದ ಮಧ್ಯದಲ್ಲಿ ಗುಲಾಂ ನಬಿ ಆಜಾದ್‌ ಅವರ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಬೇಕಾಯಿತು. ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ’ ಎಂದಿದ್ದಾರೆ.

‘ಬಹ್ರೇನ್ ಮತ್ತು ಕುವೈತ್‌ನಲ್ಲಿ ನಡೆದ ಸಭೆಯಲ್ಲಿ ನಬಿ ಭಾಗಿಯಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಸೌದಿ ಅರೇಬಿಯಾ ಮತ್ತು ಅಲ್ಜೀರಿಯಾದಲ್ಲಿ ಸಭೆ ನಡೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಪಮಾನ ಹೆಚ್ಚಳದಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ನಬಿ ತಿಳಿಸಿದ್ದಾರೆ.

ಏತನ್ಮಧ್ಯೆ, ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್‌, ನಬಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

2022ರಲ್ಲಿ ಕಾಂಗ್ರೆಸ್‌ ತೊರೆದ ನಬಿ ಅವರು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷವನ್ನು ಸ್ಥಾಪಿಸಿದ್ದರು.

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯ ನಂತರ ಭಯೋತ್ಪಾದನೆ ವಿರುದ್ಧ ಭಾರತ ನಿಲುವನ್ನು ವಿಶ್ವ ವೇದಿಕೆ ತಿಳಿಸಲು ಏಳು ಸಂಸದರ ನೇತೃತ್ವದಲ್ಲಿ ವಿವಿಧ ದೇಶಗಳಿಗೆ ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.